ಬೆಂಗಳೂರು: ರಾಜ್ಯದ ಮಲೆನಾಡು ಪ್ರದೇಶಗಳಲ್ಲಿ ಮಾರಕ ರೋಗ ಮಂಗನ ಕಾಯಿಲೆ ಹರಡುವುದನ್ನು ತಡೆಯಲು ಪ್ರಸಕ್ತ ವರ್ಷದಲ್ಲಿ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆಯೋ ಅದರ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಶಿವಮೊಗ್ಗ ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ನಿಯಂತ್ರಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಶಿವಮೊಗ್ಗದ ವಕೀಲ ಕೆ.ಪಿ. ಶ್ರೀಪಾಲ್ ಹಾಗೂ ಎನ್.ಜಿ. ರಮೇಶಪ್ಪ ಸಲ್ಲಿಸಿರುವ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಮಂಗಳವಾರ ವಿಚಾರಣೆ ನಡೆದ ವೇಳೆ ಅರ್ಜಿದಾರರ ಪರ ವಕೀಲ ಡಿ. ಕಾಶಿನಾಥ್ ವಾದಿಸಿ, 2020ರ ಜನವರಿಯಿಂದ ಮೇ ಅಂತ್ಯದವರೆಗೆ ರಾಜ್ಯದಲ್ಲಿ 15 ಮಂದಿ ಬಲಿಯಾಗಿದ್ದಾರೆ. ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕಾರವಾರಗಳಲ್ಲಿ ಮಂಗನ ಕಾಯಿಲೆ ಹೆಚ್ಚಾಗಿ ವ್ಯಾಪಿಸುತ್ತಿದೆ. ಕಳೆದ ವರ್ಷ ಸರ್ಕಾರ ಕಾಯಿಲೆ ನಿಯಂತ್ರಿಸಲು ಹಾಗು ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯ ಕ್ರಮ ಕೈಗೊಂಡಿದ್ದಾಗಿ ನ್ಯಾಯಾಲಯಕ್ಕೆ ತಿಳಿಸಿದೆ. ಆದರೆ, ಈ ವರ್ಷ ಕಾಯಿಲೆ ನಿಯಂತ್ರಣಕ್ಕೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ವಿವರಿಸಿದರು.
ಅರ್ಜಿದಾರರ ಪರ ವಕೀಲರ ಹೇಳಿಕೆ ದಾಖಲಿಸಿಕೊಂಡ ಪೀಠ, ಸರ್ಕಾರ ರೋಗ ತಡೆಗಟ್ಟಲು 2020ರಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಆಗಸ್ಟ್ 28ರೊಳಗೆ ಮಾಹಿತಿ ನೀಡಿಬೇಕು. ಯಾವೆಲ್ಲಾ ಕ್ರಮಗಳನ್ನು ಜಾರಿ ಮಾಡಲಾಗಿದೆ ಎಂಬುದರ ಸಂಪೂರ್ಣ ವಿವರಗಳನ್ನು ಪ್ರಮಾಣ ಪತ್ರದ ಮೂಲಕ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಸೆಪ್ಟೆಂಬರ್ 2ಕ್ಕೆ ಮುಂದೂಡಿತು.