ಬೆಂಗಳೂರು: ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ, ಯುವಕರ ಶಿಕ್ಷಣಕ್ಕೆ ಮತ್ತು ಕೌಶಲ್ಯ ತರಬೇತಿಗೆ ಕೇಂದ್ರ ಸರ್ಕಾರ ವಿವಿಧ ಯೋಜನೆಗಳ ಮೂಲಕ ನೀಡಿರುವ ಕೋಟ್ಯಾಂತರ ರೂಪಾಯಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಅಲ್-ಅಮೀನ್ ಶಿಕ್ಷಣ ಸಂಸ್ಥೆಗೆ ಹೈಕೋರ್ಟ್ ಕಾಲಾವಕಾಶ ನೀಡಿದೆ.
ಈ ಕುರಿತು ಬೆಂಗಳೂರು ನಿವಾಸಿ ಉಬೇದುಲ್ಲಾ ಶರೀಫ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅಲ್ ಅಮೀನ್ ಶಿಕ್ಷಣ ಸಂಸ್ಥೆ ಪರ ವಕೀಲರು, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ಪೀಠ ವಿಚಾರಣೆಯನ್ನು ಫೆ.22 ಕ್ಕೆ ಮುಂದೂಡಿತು.
ಅರ್ಜಿದಾರರ ಆರೋಪ:
ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಹಾಗೂ ಯುವಕರ ಶಿಕ್ಷಣಕ್ಕೆ ಮತ್ತು ಕೌಶಲ್ಯ ತರಬೇತಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹಲವು ಯೋಜನೆಗಳ ಕೋಟ್ಯಂತರ ರೂಪಾಯಿ ಅನುದಾನವನ್ನು ಅಲ್-ಅಮೀನ್ ಶಿಕ್ಷಣ ಸಂಸ್ಥೆ ಹಾಗೂ ಗೌಸಿಯಾ ಇಂಜಿನಿಯರಿಂಗ್ ಸಂಸ್ಥೆಗಳು ದುರ್ಬಳಕೆ ಮಾಡಿಕೊಂಡಿವೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಯೋಜನೆಗಳಿಗೆ ಸಂಬಂಧಿಸಿದಂತೆ ಅಲ್-ಅಮೀನ್ ಶಿಕ್ಷಣ ಸಂಸ್ಥೆ ಹಾಗೂ ಗೌಸಿಯಾ ಕೈಗಾರಿಕಾ ಮತ್ತು ಇಂಜಿನಿಯರಿಂಗ್ ಸಂಸ್ಥೆ ಸಲ್ಲಿಸಿರುವ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಸಚಿವಾಲಯಕ್ಕೆ ನಿರ್ದೇಶಿಸಬೇಕು. ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ವಹಿಸಬೇಕು. ಅನುದಾನ ದುರ್ಬಳಕೆ ಮಾಡಿಕೊಂಡವರಿಂದ ಹಣ ವಸೂಲಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.