ಬೆಂಗಳೂರು : ಥಾಯ್ಲೆಂಡ್‌ನಲ್ಲಿ ತಂದೆ, ಜರ್ಮನಿಯಲ್ಲಿ ತಾಯಿ ನೆಲೆಸಿದ್ದು, ಯಾರ ಬಳಿಯಲ್ಲಿ ತಾನು ಬೆಳೆಯಬೇಕೆಂಬ ಸಂದಿಗ್ದ ಪರಿಸ್ಥಿತಿಗೆ ಸಿಲುಕಿದ್ದ ಅಪ್ರಾಪ್ತ ಮಗನಿಗೆ ಹೈಕೋರ್ಟ್ ಪರಿಹಾರ ಕಂಡುಕೊಂಡಿದೆ. ಒಂಬತ್ತು ವರ್ಷದ ಬಾಲಕನೊಂದಿಗೆ ನ್ಯಾಯಮೂರ್ತಿಗಳು ಖಾಸಗಿಯಾಗಿ ಸುದೀರ್ಘವಾಗಿ ಚರ್ಚೆ ನಡೆಸಿದ್ದು, ಆತನ ಆಶಯದಂತೆ ತಂದೆಯೊಂದಿಗೆ ಬೆಳೆಯಲು ಅವಕಾಶ ಕಲ್ಪಿಸಲಾಗಿದೆ.
ಪತಿಯ ಬಳಿಯಲ್ಲಿದ್ದ ಮಗನನ್ನು ತನ್ನ ವಶಕ್ಕೆ ಒಪ್ಪಿಸುವಂತೆ ಕೋರಿ ಒಡಿಶಾ ಮೂಲದ ಮಹಿಳೆಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಮತ್ತು ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯಪಟ್ಟಿದೆ. ಭಾರತದ ಕಾನೂನಿನಲ್ಲಿ ಮಗುವಿನ ಶಿಕ್ಷಣ ಸೇರಿದಂತೆ ಕ್ಷೇಮ ಮುಖ್ಯವಾಗಿದೆ. ಆ ದೃಷ್ಟಿಕೋನದಲ್ಲಿ ಬಾಲಕನ ಜೊತೆ ಚರ್ಚೆ ನಡೆಸಿದ ಬಳಿಕ, ಆತನ ಇಚ್ಚೆಯಂತೆ ಈ ನಿರ್ಧಾರ ಕೈಗೊಂಡಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ತಾಯಿಯಾದವರು ಮಗುವಿನ ರಕ್ಷಣೆಗಿಂತಲೂ ಜರ್ಮನಿಯಲ್ಲಿ ವೃತ್ತಿಜೀವನ ಮುಂದುವರೆಸುವ ಕುರಿತು ಹೆಚ್ಚು ಆಸಕ್ತಿಯನ್ನಿಟ್ಟುಕೊಂಡಿದ್ದಾರೆ. ಅಲ್ಲದೆ, ಏಕಾಂತದಲ್ಲಿ ಉಳಿಯುವುದನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೆ, ತಂದೆಯಾದವರು ತುಂಬಾ ಉದಾರತೆ ಹೊಂದಿದ್ದಾರೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.
ಉಭಯ ಪಕ್ಷಗಾರರ ವಾದ ಮತ್ತು ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಜರ್ಮನಿ ಶಾಲೆಯಲ್ಲಿ ಮಗುವಿಗೆ ತೊಂದರೆಯಾಗುತ್ತಿರುವ ಕುರಿತು ಮನಗಂಡಿದ್ದರು. ಅಲ್ಲದೆ, ಜರ್ಮನಿಯ ಶಾಲೆಯಲ್ಲಿ 29 ವಿದ್ಯಾರ್ಥಿಗಳಲ್ಲಿ ಕೇವಲ ಮೂವರು ಮಾತ್ರ ಭಾರತೀಯರು. ಅಲ್ಲಿನ ಶಿಕ್ಷಕರಿಗೆ ಇಂಗ್ಲಿಷ್ ಭಾಷೆ ಗೊತ್ತಿರಲಿಲ್ಲ. ಹೀಗಾಗಿ ಬಾಲಕ ಬ್ಯಾಂಕಾಕ್‌ನಲ್ಲಿದ್ದರೆ ಹೆಚ್ಚು ಸಂತೋಷವಾಗಿರುತ್ತಾನೆ ಎಂಬ ಅಭಿಪ್ರಾಯಕ್ಕೆ ನ್ಯಾಯಪೀಠ ಬಂದಿದೆ.
ಜೊತೆಗೆ, ಬಾಲಕ ಅತ್ಯಂತ ಚಾಣಾಕ್ಷವಾಗಿದೆ. ತನ್ನ ಆಯ್ಕೆಯನ್ನು ತಾನೇ ಮಾಡಿಕೊಳ್ಳುವಷ್ಟು ಬುದ್ದಿವಂತವಾಗಿದೆ ಎಂಬುದು ಗೊತ್ತಾಗಿದೆ. ಅಲ್ಲದೆ, ಪ್ರಾಪಂಚಿಕ ಪರಿಜ್ಞಾನವೂ ಉತ್ತಮವಾಗಿದೆ. ತಂದೆಯೊಂದಿಗೆ ಬ್ಯಾಂಕಾಕ್ನಲ್ಲಿ ನೆಲೆಸಲು ಯಾವುದೇ ತೊಂದರೆಯಿಲ್ಲ ಎಂಬುದಾಗಿ ವಿವರಿಸಿದ್ದು, ಅಲ್ಲಿಯೇ ನೆಲೆಸುವುದು ಉತ್ತಮ ಎಂಬುದಾಗಿ ಪೀಠ ತಿಳಿಸಿದೆ.
ಅಷ್ಟೇ ಅಲ್ಲದೆ, ತಾಯಿಗೆ ಮಗುವನ್ನು ಮೂರು ತಿಂಗಳಿಗೊಮ್ಮೆ ಭೇಟಿ ಮಾಡುವುದು, ರಜೆ ದಿನಗಳಲ್ಲಿ ಥಾಯ್ಲೆಂಡ್ ಮತ್ತು ಭಾರತ ಸೇರಿದಂತೆ ಯಾವುದಾದರೂ ಒಂದು ಭಾಗದಲ್ಲಿ ಕಳೆಯುವುದಕ್ಕೆ ಅವಕಾಶ ನೀಡಿದೆ. ವಾರಕ್ಕೆ ಎರಡು ಬಾರಿ ಫೋನ್/ವಿಡಿಯೋ ಕರೆ ಮಾಡುವುದಕ್ಕೆ ಅವಕಾಶ ನೀಡಿ ಹೈಕೋರ್ಟ್ ಆದೇಶಿಸಿದೆ. ಇದೇ ವೇಳೆ, ಮಗುವಿನ ವಾಸ ಸ್ಥಳವನ್ನು ತಾಯಿ ನಿರ್ಧರಿಸುತ್ತಾರೆ ಎಂಬ ಜರ್ಮನಿ ನ್ಯಾಯಾಲಯವು ಏಕಪಕ್ಷೀಯವಾಗಿ ನೀಡಿದ್ದ ಆದೇಶವನ್ನು ಹೈಕೋರ್ಟ್ ತಳ್ಳಿಹಾಕಿದೆ.
ಪ್ರಕರಣದ ಹಿನ್ನೆಲೆ: ಒಡಿಶಾ ಮೂಲದ ದಂಪತಿ 2013ರಲ್ಲಿ ವಿವಾಹವಾಗಿದ್ದು, ಮಗವಿಗೆ ಜನ್ಮ ನೀಡಿದ್ದರು. ದಂಪತಿಗಳಿಬ್ಬರೂ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. 2016ರಲ್ಲಿ ಉದ್ಯೋಗಕ್ಕಾಗಿ ಬ್ಯಾಂಕಾಕ್‌ಗೆ ತೆರಳಿದ್ದರು. ಬಳಿಕ 2022ರಲ್ಲಿ ಜರ್ಮನಿಗೆ ತೆರಳುವುದಕ್ಕೆ ನಿರ್ಧರಿಸಿದ್ದರು. 2023ರ ಜುಲೈ ತಿಂಗಳಲ್ಲಿ ಮಗನನ್ನು ಜರ್ಮನಿಯಿಂದ ದುಬೈಗೆ ಹೋಗುವ ವಿಮಾನದಲ್ಲಿ ಭಾರತಕ್ಕೆ ಕರೆತಂದಿದ್ದರು. ಆದರೆ ಕೆಲ ದಿನಗಳ ಬಳಿಕ ತನ್ನ ಮಗನನ್ನು ಪತಿ ಅಪಹರಣ ಮಾಡಿದ್ದಾರೆ ಎಂದು ಪತ್ನಿಯೇ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಬಳಿಕ ಮಕ್ಕಳ ರಕ್ಷಣಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಿದ್ದರು.
ಜರ್ಮನಿಯ ಕೌಟುಂಬಿಕ ನ್ಯಾಯಾಲಯದಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಿ ಮಗುವಿನ ವಾಸಸ್ಥಳವನ್ನು ತಾಯಿ ನಿರ್ಧರಿಸಬೇಕು ಎಂದು ವಾದಿಸಿದ್ದರು. ಇದನ್ನು ಪರಿಗಣಿಸಿದ್ದ ನ್ಯಾಯಾಲಯ ಏಕಪಕ್ಷೀಯವಾಗಿ ಅರ್ಜಿಯನ್ನು ಪುರಸ್ಕರಿಸಿ ಆದೇಶ ನೀಡಿತ್ತು. ಇದಾದ ಬಳಿಕ ಕರ್ನಾಟಕ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಮಗುವನ್ನು ವಶಕ್ಕೆ ಕೊಡಿಸುವಂತೆ ಕೋರಿದ್ದರು.
ವಿಚಾರಣೆ ವೇಳೆ ಪ್ರತಿವಾದಿ ಗಂಡನ ಪರ ವಕೀಲರು, ಬ್ಯಾಂಕಾಕ್ ಇಲ್ಲವೇ ಭಾರತಕ್ಕೆ ಸ್ಥಳಾಂತರಗೊಳ್ಳಲು ಹೆಂಡತಿಗೆ ಮನವಿ ಮಾಡಿದ್ದರು. ಆದರೆ, ಪತ್ನಿ ಮಗನಿಗೆ ಜರ್ಮನಿಯಲ್ಲಿ ಶಿಕ್ಷಣ ಉತ್ತಮವಾಗಿದೆ ಎಂದು ತಿಳಿಸಿ ಅಲ್ಲಿಯೇ ನೆಲೆಸಲು ನಿರ್ಧರಿಸಿದ್ದರು.
ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯ ಕೊರತೆಯಿಂದಾಗಿ ಬಡವರೂ ಸಹ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವಂತಾಗಿದೆ: ಹೈಕೋರ್ಟ್ ಬೇಸರ