ಬೆಂಗಳೂರು: ಐದು ಮತ್ತು ಎಂಟನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ಮುಂದಾಗಿದ್ದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ದ್ವಿಸದಸ್ಯ ಪೀಠ ಗ್ರೀನ್ ಸಿಗ್ನಲ್ ನೀಡಿದೆ. ಮುಂದಿನ 10 ದಿನಗಳಲ್ಲಿ ಪರೀಕ್ಷಗೆ ದಿನಾಂಕ ನಿಗದಿ ಪಡಿಸಿ ಮಾ.27ರ ಅಂತ್ಯದ ವೇಳೆಗೆ ಪರೀಕ್ಷೆಗಳನ್ನು ನಡೆಸಬಹುದು ಎಂದು ನ್ಯಾಯಪೀಠ ಸೂಚನೆ ನೀಡಿದೆ.
ಐದು ಮತ್ತು ಎಂಟನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನು ರದ್ದು ಗೊಳಿಸಿದ್ದ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸರ್ಕಾರ ದ್ವಿ ಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಜಿ.ನರೇಂದ್ರ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ನ್ಯಾಯಪೀಠ, ಏಕ ಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಿ ಆದೇಶಿಸಿದೆ.
ಪರೀಕ್ಷೆಗೆ ಪ್ರಸ್ತುತ ಇರುವ ಪಠ್ಯದಿಂದ ಮಾತ್ರ ಪ್ರಶ್ನೆಗಳನ್ನು ಸಿದ್ದಪಡಿಸಬೇಕು. ಪಠ್ಯೇತರವಾಗಿ ಯಾವುದೇ ಪರೀಕ್ಷೆಗಳನ್ನು ಕೇಳಬಾರದು ಎಂದು ಸೂಚನೆ ನೀಡಿದೆ. ಜೊತೆಗೆ, ಈ ಬೋರ್ಡ್ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವಂತಿಲ್ಲ. ಅನುತ್ತೀರ್ಣಗೊಂಡವರನ್ನು ಅದೇ ತರಗತಿಯಲ್ಲಿ ಉಳಿಸದೆ ಮುಂದಿನ ತರಗತಿಗೆ ಕಳುಹಿಸಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಷ್ಟೇ ಅಲ್ಲದೆ, ಪರೀಕ್ಷಾ ಫಲಿತಾಂಶವನ್ನು ಸಾರ್ವಜನಿಕವಾಗಿ ಪ್ರಕಟಮಾಡಬಾರದು, ಅದರ ಬದಲಾಗಿ ಆಯಾ ಶಾಲೆಗಳಿಗೆ ಗೌಪ್ಯವಾಗಿ ರವಾನಿಸಬೇಕು. ಈ ಫಲಿತಾಂಶವನ್ನು ಶಾಲಾ ಆಡಳಿತ ಮಂಡಳಿಯೂ ಸಾರ್ವಜನಿಕವಾಗಿ ಪ್ರಕಟಿಸದೆ ಕಡಿಮೆ ಅಂಕ ಪಡೆಯುವ ಮಕ್ಕಳಿಗೆ ತಿಳಿ ಹೇಳಬೇಕು ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು ?: ರಾಜ್ಯ ಪಠ್ಯಕ್ರಮ ಶಾಲೆಗಳ 5 ಮತ್ತು 8ನೇ ತರಗತಿಗಳ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನದ ಬದಲಾಗಿ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ತೀರ್ಮಾನಿಸಿ ಸರ್ಕಾರವು 2022ರ ಡಿ.12, 13 ಮತ್ತು 2023ರ ಜ.4ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ಸುತ್ತೋಲೆಗಳನ್ನು ರದ್ದುಪಡಿಸಲು ಕೋರಿ ಕರ್ನಾಟಕ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು.
ಈ ಅರ್ಜಿಗಳನ್ನು ಮಾನ್ಯ ಮಾಡಿರುವ ಹೈಕೋರ್ಟ್, ಸರ್ಕಾರವು ಹೊರಡಿಸಿದ ಸುತ್ತೊಲೆಯು ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ಧ್ಯೇಯೋದ್ದೇಶಗಳಿಗೆ ವಿರುದ್ಧವಾಗಿದೆ. ಇಂತಹ ಸುತ್ತೋಲೆಗಳನ್ನು ಕಾಯ್ದೆ ಅಥವಾ ನಿಯಮಗಳಿಗೆ ಪೂರಕವಾಗಿರಬೇಕು ಹೊರತು ಅತಿಕ್ರಮಿಸುವಂತೆ ಅಲ್ಲ. ಒಂದೊಮ್ಮೆ ಸುತ್ತೋಲೆಗಳು ನಿಯಮಗಳನ್ನು ಅತಿಕ್ರಮಿಸುವಂತೆ ಇದ್ದರೆ ರದ್ದುಪಡಿಸಲು ಅರ್ಹವಾಗಿರುತ್ತವೆ. ಸರ್ಕಾರದ ಸುತ್ತೋಲೆ ಆರ್‌ಟಿಇ ಕಾಯ್ದೆಯ ಸೆಕ್ಷನ್ 16ರ ವಿರುದ್ಧವಾಗಿದೆ. ಸುತ್ತೋಲೆ ಹೊರಡಿಸುವ ಮುನ್ನ ಸರ್ಕಾರವು ಕಾನೂನು ಪ್ರಕ್ರಿಯೆ ಪಾಲಿಸಿಲ್ಲ. ಈ ವಿಷಯವನ್ನು ರಾಜ್ಯ ಶಾಸಕಾಂಗದ ಮುಂದೆ ಮಂಡಿಸಿಲ್ಲ ಎಂದು ಹೇಳಿತ್ತು.
ಅಲ್ಲದೆ, ಆರ್‌ಟಿಇ ಕಾಯ್ದೆಯಡಿ ನಿರ್ದಿಷ್ಟ ಅಧ್ಯಯನ ಮತ್ತು ಹಾಗೂ ಮೌಲ್ಯಮಾಪನವು ಪ್ರಕ್ರಿಯೆಯನ್ನು ನಿಗದಿಪಡಿಸಲು ಸರ್ಕಾರ ಸುತ್ತೋಲೆ ಹೊರಡಿಸಿದೆ. ಸರ್ಕಾರಕ್ಕೆ ನಿಯಮಗಳು ಮತ್ತು ನೀತಿಗಳನ್ನು ರೂಪಿಸಲು ಅಧಿಕಾರವಿದೆ. ಆದರೆ, ಅದನ್ನು ಚಲಾವಣೆ ಮಾಡಬೇಕಾದರೆ ಕಾಯ್ದೆಯ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಆರ್‌ಟಿಇ ಕಾಯ್ದೆಯಡಿ ರೂಪಿಸುವ ಪ್ರತಿಯೊಂದು ನಿಯಮ ಮತ್ತು ಅಧಿಸೂಚನೆಗಳು ಕಡ್ಡಾಯವಾಗಿ ಶಾಸಕಾಂಗ ಮುಂದೆ ಮಂಡಿಸಿದ ನಂತರವೇ ಮಾಡಬೇಕಾಗುತ್ತದೆ. ಈ ಪ್ರಕರಣದಲ್ಲಿ ಈ ಪ್ರಕ್ರಿಯೆ ಪಾಲನೆಯಾಗಿಲ್ಲ ಎಂದು ತಿಳಿಸಿ ಸುತ್ತೋಲೆಯನ್ನು ರದ್ದುಪಡಿಸಿತ್ತು.
ಇದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ.
ಇದನ್ನೂ ಓದಿ: 5, 8ನೇ ತರಗತಿಗಳ ಬೋರ್ಡ್ ಪರೀಕ್ಷೆ ರದ್ದು ಆದೇಶಕ್ಕೆ ತಡೆ ನೀಡಲು ದ್ವಿಸದಸ್ಯ ಪೀಠ ನಿರಾಕರಣೆ: ಪರೀಕ್ಷೆ ದಿನಾಂಕ ಮುಂದೂಡಿಕೆ