ಬೆಂಗಳೂರು : ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮಾಡುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಚಿಂತನೆಗೆ ಬಿಜೆಪಿ ಹೈಕಮಾಂಡ್ ಬ್ರೇಕ್ ಹಾಕಿದೆ. ಸದ್ಯಕ್ಕೆ ಇರುವ ಉಸ್ತುವಾರಿಗಳೇ ಮುಂದುವರೆಯಲಿ ಎಂದು ಸಲಹೆ ನೀಡಿದ್ದು, ಪಂಚರಾಜ್ಯಗಳ ಚುನಾವಣೆ ಬಳಿಕ, ಈ ವಿಚಾರದ ಬಗ್ಗೆ ಚರ್ಚಿಸುವಂತೆ ಸೂಚಿಸಿದೆ.
ಉಪಚುನಾವಣೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮಾಡಿದಲ್ಲಿ ಚುನಾವಣೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಸಚಿವರಲ್ಲಿ ಅಸಮಾಧಾನ ಸ್ಫೋಟಗೊಂಡರೆ ಪ್ರಚಾರ ಕಾರ್ಯಕ್ಕೆ ತೊಡಕಾಗಲಿದೆ. ಈಗ ಏಕಾಏಕಿ ಬದಲಾವಣೆ ಮಾಡಿದರೆ ಸಚಿವರಿಗೂ ಇರಿಸು-ಮುರಿಸಾಗಲಿದೆ. ಹಾಗಾಗಿ ಉಸ್ತುವಾರಿ ಸಚಿವರ ಬದಲಾವಣೆ ಮಾಡುವ ಸಿಎಂ ನಿರ್ಧಾರಕ್ಕೆ ಹೈಕಮಾಂಡ್ ಸಮ್ಮತಿ ನೀಡಲು ನಿರಾಕರಿಸಿದೆ ಎಂದು ಹೇಳಲಾಗ್ತಿದೆ.
ಓದಿ : ಮುನಿಸು ತರವೇ..ಮಾತನಾಡಿಸದೆ ಪರಸ್ಪರ ಅಂತರ ಕಾಯ್ದುಕೊಂಡ ಬಿಎಸ್ವೈ-ಈಶ್ವರಪ್ಪ
ರಾಜ್ಯ ಬಿಜೆಪಿಯ ಹಲವು ವಿಷಯಗಳಿಗೆ ಸಂಬಂಧಪಟ್ಟಂತೆ ಪಂಚರಾಜ್ಯಗಳ ಚುನಾವಣೆ ಮತ್ತು ರಾಜ್ಯದ ಉಪಚುನಾವಣೆ ನಂತರ ಹೈಕಮಾಂಡ್ ರಂಗ ಪ್ರವೇಶ ಮಾಡಲಿದೆ. ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ, ಸಿಎಂ ಯಡಿಯೂರಪ್ಪ ವಿರುದ್ಧ ಸಚಿವ ಈಶ್ವರಪ್ಪ ಪತ್ರ ಬರೆದಿರುವ ಕುರಿತು ಮತ್ತು ಪದೇ ಪದೇ ಸಿಎಂ ಕುಟುಂಬದ ವಿರುದ್ಧ ಹೇಳಿಕೆ ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಚಾರದ ಬಗ್ಗೆಯೂ ಚರ್ಚೆ ನಡೆಯಲಿದೆ ಎನ್ನಲಾಗ್ತಿದೆ.
ಸಿಎಂ ಲೆಕ್ಕಾಚಾರ : ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಲಿದೆ ಎನ್ನುವ ಉದ್ದೇಶವನ್ನು ಸಿಎಂ ಯಡಿಯೂರಪ್ಪ ಹೊಂದಿದ್ದರು. ಯಾರಿಗೂ ತವರು ಜಿಲ್ಲೆಯ ಉಸ್ತುವಾರಿ ಬೇಡ, ತವರು ಜಿಲ್ಲೆಯವರಿಗೆ ನೀಡಿದರೆ, ಅವರು ಅವರ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಲಿದ್ದಾರೆ. ತಾರತಮ್ಯ ಮಾಡುವ ಸಾಧ್ಯತೆ ಹೆಚ್ಚು. ಬೇಕಾದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ, ಯೋಜನೆಗಳ ಜಾರಿಯಲ್ಲೂ ತಮ್ಮ ಕ್ಷೇತ್ರಕ್ಕೇ ಹೆಚ್ಚಿನ ಆದ್ಯತೆ ನೀಡಲಿದ್ದಾರೆ. ಇದರಿಂದ ಇತರ ಕ್ಷೇತ್ರಗಳ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ. ಹಾಗಾಗಿ ಸಚಿವರಿಗೆ ಸಂಬಂಧ ಇರದ ಜಿಲ್ಲೆಯ ಉಸ್ತುವಾರಿ ನೀಡಿದರೆ ಪಕ್ಷಪಾತಕ್ಕೆ ಆಸ್ಪದವಿಲ್ಲದೆ ಕೆಲಸ ಕಾರ್ಯಗಳು ನಡೆಯಲಿವೆ ಎನ್ನುವ ಕಾರಣ ಮುಂದಿಟ್ಟು ಯಡಿಯೂರಪ್ಪ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು.
ಈಶ್ವರಪ್ಪ ಸೇಫ್ : ತಮ್ಮ ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ ಕುರಿತು ಹೈಕಮಾಂಡ್ ನಾಯಕರು ಮತ್ತು ರಾಜ್ಯಪಾಲರಿಗೆ ಪತ್ರ ಬರೆದಿದ್ದ ಈಶ್ವರಪ್ಪರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಗೂ ಹೈಕಮಾಂಡ್ ತೆರೆ ಎಳೆದಿದೆ. ಆಪ್ತರ ಮುಂದೆ ಕಿಡಿಕಾರಿದ್ದ ಸಿಎಂ ಯಡಿಯೂರಪ್ಪ, ಈಶ್ವರಪ್ಪ ಅವರ ಖಾತೆ ಬದಲಿಸುತ್ತೇನೆ, ಸಂಪುಟದಿಂದಲೇ ಕೈಬಿಡುತ್ತೇನೆ ಎಂದು ಅಬ್ಬರಿಸಿ ಬೊಬ್ಬಿರಿದಿದ್ದರು. ಆದರೆ, ಇದೀಗ ಹೈಕಮಾಂಡ್ ಸಚಿವರ ಖಾತೆ ಬದಲಿಸಬಾರದು, ಯಾರನ್ನೂ ಸಂಪುಟದಿಂದ ಕೈಬಿಡಬಾರದು, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಲ್ಲೂ ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ. ಹಾಗಾಗಿ, ಈಶ್ವರಪ್ಪ ಅವರ ಖಾತೆ ಬದಲಾವಣೆ, ಸಂಪುಟದಿಂದ ಕೋಕ್, ಉಸ್ತುವಾರಿ ಸ್ಥಾನ ಬದಲಿಸುವ ಯಾವ ಅವಕಾಶವೂ ಸದ್ಯದ ಮಟ್ಟಿಗೆ ಸಿಎಂಗೆ ಇಲ್ಲದಂತಾಗಿದೆ. ಉಪಚುನಾವಣೆ ಮುಗಿದು ಹೈಕಮಾಂಡ್ ರಂಗಪ್ರವೇಶ ಮಾಡುವವರೆಗೂ ಈಶ್ವರಪ್ಪ ಸೇಫ್ ಆಗಿರಲಿದ್ದಾರೆ.