ಬೆಂಗಳೂರು: ರಾಜ್ಯ ಬಿಜೆಪಿ ಉಸ್ತುವಾರಿಯನ್ನಾಗಿ ಉತ್ತರ ಪ್ರದೇಶ ಸಂಸದ ಅರುಣ್ ಸಿಂಗ್, ಸಹ ಉಸ್ತುವಾರಿಯನ್ನಾಗಿ ತೆಲಂಗಾಣ ಶಾಸಕಿ ಡಿ.ಕೆ ಅರುಣಾರನ್ನು ನೇಮಕಗೊಳಿಸಿದ್ದು ಸಿ.ಟಿ ರವಿ ಸೇರಿ ರಾಜ್ಯದ ಮೂವರು ನಾಯಕರಿಗೆ ಹೊರರಾಜ್ಯದ ಜವಾಬ್ದಾರಿ ನೀಡಲಾಗಿದೆ.
ಬಿಹಾರ ಚುನಾವಣೆ ಸೇರಿದಂತೆ ದೇಶದ ಹಲವು ಕಡೆ ಉಪ ಚುನಾವಣೆಗಳು ನಡೆದ ಬೆನ್ನಲ್ಲೇ ನೆನೆಗುದಿಗೆಗೆ ಬಿದ್ದಿದ್ದ ರಾಜ್ಯ ಉಸ್ತುವಾರಿ, ಸಹ ಉಸ್ತುವಾರಿಗಳನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ. ಒಟ್ಟು 36 ಉಸ್ತುವಾರಿಗಳನ್ನು ನೇಮಕಗೊಳಿಸಿದ್ದು, 27 ಸಹ ಉಸ್ತುವಾರಿಗಳನ್ನು ನೇಮಕಗೊಳಿಸಿ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯದ ಉಸ್ತುವಾರಿಯಾಗಿ ಉತ್ತರಪ್ರದೇಶ ಸಂಸದ ಅರುಣ ಸಿಂಗ್ ಮತ್ತು ರಾಜಶೇಖರ ರೆಡ್ಡಿ ಮತ್ತು ರೋಸಯ್ ಸಂಪುಟದಲ್ಲಿ ಸಚಿವೆಯಾಗಿದ್ದ ಶಾಸಕಿ ಡಿ.ಕೆ ಅರುಣಾ ಅವರನ್ನು ಸಹ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಇತ್ತೀಚೆಗಷ್ಟೇ ರಾಷ್ಟ್ರ ರಾಜಕಾರಣ ಪ್ರವೇಶ ಮಾಡಿರುವ ಸಿ.ಟಿ ರವಿ ಅವರನ್ನು ದಕ್ಷಿಣ ಭಾರತ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಗೋವಾ ರಾಜ್ಯಗಳ ಉಸ್ತುವಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.
ನಿರ್ಮಲ್ ಕುಮಾರ್ ಸುರಾನಾ ಅವರನ್ನು ಪಾಂಡಿಚೇರಿ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಶಾಸಕ ಸುನೀಲ್ ಕುಮಾರ್ ಅವರನ್ನು ಕೇರಳ ರಾಜ್ಯದ ಸಹ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ಮುರುಳೀಧರರಾವ್ ಅವರು ಬಿಜೆಪಿ ರಾಜ್ಯ ಉಸ್ತುವಾರಿಯಾಗಿದ್ದರು, ಅವರ ಅಧಿಕಾರ ಅವದಿ ಪೂರ್ಣಗೊಂಡಿದ್ದರೂ ತಾತ್ಕಾಲಿಕವಾಗಿ ಅವರನ್ನೇ ಮುಂದುವರೆಸಲಾಗಿತ್ತು, ಚುನಾವಣೆ ಉಪ ಚುನಾವಣೆ ಕಾರಣದಿಂದ ಉಸ್ತುವಾರಿಗಳ ಬದಲಾವಣೆಯನ್ನು ಮುಂದೂಡಲಾಗಿತ್ತು,ಇದೀಗ ರಾಷ್ಟ್ರ ಮಟ್ಟದಲ್ಲೇ ರಾಜ್ಯ ಉಸ್ತುವಾರಿಗಳನ್ನು ಹೊಸದಾಗಿ ನೇಮಕ ಮಾಡಿದ್ದು ರಾಜ್ಯಕ್ಕೂ ಹೊಸ ಉಸ್ತುವಾರಿ, ಸಹ ಉಸ್ತುವಾರಿ ನೇಮಕಗೊಂಡಿದ್ದಾರೆ.