ಬೆಂಗಳೂರು: ಮನೆಗೆಲಸದ ವಿಚಾರಕ್ಕಾಗಿ ತಾಯಿ ಬೈದಿದಕ್ಕೆ ಮನನೊಂದ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಗಿರಿನಗರದ ಮುನೇಶ್ವರ ಬ್ಲಾಕ್ ನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದ 16 ವರ್ಷದ ಮಹಾಲಕ್ಷ್ಮೀ ಆತ್ಮಹತ್ಯೆಗೆ ಶರಣಾದ ಬಾಲಕಿ. ಗಾಂಧಿನಗರ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಾಲಕ್ಷ್ಮೀ ಜೊತೆ ತಾಯಿ ನಡುವೆ ಪ್ರತಿದಿನ ಸಣ್ಣಪುಟ್ಟ ಜಗಳ ನಡೆಯುತಿತ್ತು. ಕಳೆದ ಎರಡು ದಿನಗಳ ಹಿಂದೆ ಮನೆಗೆಲಸ ವಿಚಾರಕ್ಕಾಗಿ ಮಗಳಿಗೆ ತಾಯಿ ಬೈದು ಕೆಲಸಕ್ಕೆ ಹೋಗಿದ್ದರು.
ಮನೆಯಲ್ಲಿದ್ದ 10 ವರ್ಷದ ಸಹೋದರನನ್ನು ಸ್ನಾನದ ಮನೆಯಲ್ಲಿ ಗೃಹ ಬಂಧನದಲ್ಲಿರಿಸಿ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ. ಗೃಹ ಬಂಧನದಲ್ಲಿದ್ದ ಸಹೋದರನ ಶಬ್ಧಕ್ಕೆ ಸ್ಥಳೀಯರು ಮನೆಯತ್ತ ದೌಡಾಯಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ ಗಿರಿನಗರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.