ಬೆಂಗಳೂರು : ತನ್ನ ಹುಟ್ಟುಹಬ್ಬ ದಿನದಂದೇ ಬರ್ಬರವಾಗಿ ಹತ್ಯೆಗೊಳಗಾಗಿದ್ದ ಯುವಕ ಹೇಮಂತ್ ಕುಮಾರ್ ಕೊಲೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಬಾಲ ಆರೋಪಿಗಳನ್ನು ಬಳಸಿಕೊಂಡು ಕೊಲೆ ಮಾಡಿಸಿದರೆ ತಮಗೆ ಏನು ಆಗುವುದಿಲ್ಲ ಎಂದು ಭಾವಿಸಿದ ಕುಖ್ಯಾತ ರೌಡಿಶೀಟರ್ ರಿಜ್ವಾನ್ ಪಾಷಾ ಅಲಿಯಾಸ್ ಕುಳ್ಳ ರಿಜ್ವಾನ್ ಕಾನೂನು ಸಂಘರ್ಷಕ್ಕೆ ಒಳಗಾದವರನ್ನು ಮುಂದಿಟ್ಟು ಹತ್ಯೆ ಮಾಡಿಸಿರುವುದು ತನಿಖೆ ವೇಳೆ ಬಹಿರಂಗವಾಗಿದೆ.
ಈ ಪ್ರಕರಣದಲ್ಲಿ ಕುಳ್ಳು ರಿಜ್ವಾನ್ ಸಹಚರ ಹರೀಶ್ನನ್ನು ಬಂಧಿಸಿ, ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ಬಾಲ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕೆಂಪೇಗೌಡನಗರ ಪೊಲೀಸರಿಂದ ಬಂಧಿತನಾಗಿರುವ ಕುಳ್ಳ ರಿಜ್ವಾನ್ನ ಮುಂದಿನ ದಿನಗಳಲ್ಲಿ ಬಾಡಿ ವಾರಂಟ್ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಕೊಲೆ ಮಾಡಿದ್ದು ಆಕಸ್ಮಿಕವಲ್ಲ, ಪೂರ್ವ ಸಂಚು : ಟಿ.ಗೊಲ್ಲಹಳ್ಳಿ ನಿವಾಸಿ ಹೇಮಂತ್ ಹಾಗೂ ಬಂಧಿತ ಹರೀಶ್ಗೆ ನಡುವೆ ಈ ಹಿಂದೆ ಮಾತಿನ ಚಕಮಕಿ ನಡೆದಿತ್ತು. ಹತ್ಯೆಯಾದ ಹೇಮಂತ್ ಕುಳ್ಳ ರಿಜ್ವಾನ್ ನ ಕುರಿತು ಕೆಟ್ಟದಾಗಿ ಮಾತನಾಡಿದ್ದ. ಇದನ್ನು ಸಹಿಸದ ಹರೀಶ್, ತನ್ನ ಗುರು ರಿಜ್ವಾನ್ ಗಮನಕ್ಕೂ ತಂದಿದ್ದ.
ಇದರಿಂದ ಆಕ್ರೋಶಗೊಂಡ ರಿಜ್ವಾನ್ ಹೇಮಂತ್ ನನ್ನು ಮುಗಿಸುವಂತೆ ಸೂಚಿಸಿದ್ದ. ರಿಜ್ವಾನ್ನ ಸೂಚನೆಯಂತೆ ಕೊಲೆಗೆ ಸಂಚು ರೂಪಿಸಿದ ಹರೀಶ್, ತನ್ನ ಜೊತೆಗಿದ್ದ ನಾಲ್ವರು ಬಾಲಕರನ್ನು ಹತ್ಯೆಗೆ ಬಳಸಿದ್ದ. ಈ ಮೂಲಕ ಬಾಲಾಪರಾಧಿಗಳಿಗೆ ಹೆಚ್ಚು ಶಿಕ್ಷೆಯಾಗುವುದಿಲ್ಲ. ಜೊತೆಗೆ ತನಗೂ ಏನೂ ತೊಂದರೆಯಾಗುವುದಿಲ್ಲ ಎಂದು ಹರೀಶ್ ಭಾವಿಸಿದ್ದ.
ಜನ್ಮದಿನದಂದೇ ಹತ್ಯೆ ಮಾಡಿದ ಬಾಲಕರು: ಮೃತ ಹೇಮಂತ್ ನಾಲ್ಕು ತಿಂಗಳ ಹಿಂದೆ ಚಾಮರಾಜಪೇಟೆಯಿಂದ ಟಿ.ಗೊಲ್ಲಹಳ್ಳಿಯ ಮನೆಗೆ ಬಂದಿದ್ದ. ಜುಲೈ 16ರಂದು ಹೇಮಂತ್ ಬರ್ತ್ ಡೇ ಸಲುವಾಗಿ ಚಾಮರಾಜಪೇಟೆಯಲ್ಲಿರುವ ಸ್ನೇಹಿತರೊಂದಿಗೆ ಬಂದು ಬಾರ್ ವೊಂದರಲ್ಲಿ ಪಾರ್ಟಿ ಮಾಡಿದ್ದ. ತಡರಾತ್ರಿವರೆಗೂ ಪಾರ್ಟಿಯಲ್ಲಿ ಭಾಗಿಯಾಗಿ ನಂತರ ಹೇಮಂತ್, ಮನೆಗೆ ಹೋಗುವಾಗ ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿಗಳು ಲಿಫ್ಟ್ ಕೊಡುವ ನೆಪದಲ್ಲಿ ಹೇಮಂತ್ ನನ್ನ ಗಾಡಿ ಹತ್ತಿಸಿಕೊಂಡಿದ್ದರು.
ಹೀಗೆ ನೈಸ್ ರೋಡ್ ತಲುಪುತ್ತಿದ್ದಂತೆ ಈ ಆರೋಪಿಗಳು ನಮ್ಮ ಗುರು ಕುಳ್ಳ ರಿಜ್ವಾನ್ ಗೊತ್ತಿಲ್ವಾ ನಿನಗೆ ಎಂದು ಕ್ಯಾತೆ ತೆಗೆದಿದ್ದಾರೆ. ಇದಕ್ಕೆ ಯಾವ ಗುರು ಗೊತ್ತಿಲ್ಲ ಎಂದು ಹೇಮಂತ್ ಹೇಳಿದ್ದ. ಇದರಿಂದ ಅಕ್ರೋಶಗೊಂಡ ಆರೋಪಿಗಳು ತಮ್ಮ ಸಂಚಿನಂತೆ ಮಾರಕಾಸ್ತ್ರಗಳಿಂದ ತಲೆಭಾಗಕ್ಕೆ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ : ಹೈ ಪ್ರೊಫೈಲ್ ಸೆಕ್ಸ್ ರಾಕೆಟ್: ಬೆಂಗಳೂರಿನ ಹೆಣ್ಣುಮಗಳು ಸೇರಿ 11 ಯುವತಿಯರು, ಓರ್ವ ಕಿಂಗ್ಪಿನ್ ಬಂಧನ