ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಅಕ್ಟೋಬರ್ 29 ಮತ್ತು 30ರಂದು ಹಿಂಗಾರು ಮಾರುತಗಳು ಪ್ರಬಲವಾಗಲಿದ್ದು, ಗುಡುಗುಸಹಿತ ಮಳೆಯಾಗಲಿದೆ. ಬೆಂಗಳೂರು ನಗರ ಸೇರಿದಂತೆ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇಂದಿನಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ದಾವಣಗೆರೆ, ತುಮಕೂರು, ಹಾಸನ, ಚಿಕ್ಕಮಗಳೂರು ಹಾಗು ಚಿತ್ರದುರ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಅ.30ಕ್ಕೆ ಈ ಜಿಲ್ಲೆಗಳ ಜೊತೆಗೆ ಕರಾವಳಿಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಗುರುವಾರ ಮಳೆ ಅಬ್ಬರ ಇರುವುದಿಲ್ಲ. ಉತ್ತರ ಕರ್ನಾಟಕದಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ಇಲಾಖೆಯ ವರದಿಯಲ್ಲಿ ತಿಳಿಸಿದೆ.
ವಾಡಿಕೆಗಿಂತ ಕಡಿಮೆ ಉಷ್ಣತೆ: ಬುಧವಾರ ಬೀದರ್ನಲ್ಲಿ ಕನಿಷ್ಠ 12 ಡಿಗ್ರಿ ಸೆಲ್ಸಿಯಸ್ ಮತ್ತು ಶಿರಾಲಿಯಲ್ಲಿ ಗರಿಷ್ಠ 33.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಉಷ್ಣತೆ ವರದಿಯಾಗುತ್ತಿದ್ದು, ಚಳಿಯ ವಾತಾವರಣ ಇದೆ.
ಎಲ್ಲೆಲ್ಲಿ ಎಷ್ಟು ಮಳೆ: ಈಗಾಗಲೇ ಬೆಳಗಾವಿಯ ಲೋಂಡಾ, ಶಿವಮೊಗ್ಗದ ಆಗುಂಬೆಯಲ್ಲಿ ತಲಾ 5 ಸೆಂ.ಮೀ ಮತ್ತು ಉತ್ತರ ಕನ್ನಡದ ಜಗಲಬೇಟ್, ಮೈಸೂರಿನ ಕೆ.ಆರ್.ನಗರದಲ್ಲಿ 4 ಸೆಂ.ಮೀ ಹಾಗೂ ದಕ್ಷಿಣ ಕನ್ನಡದ ಪುತ್ತೂರು, ಮೈಸೂರಿನ ಬಿಳಿಕೆರೆ, ಕೊಡಗಿನ ನಾಪೊಕ್ಲು, ಚಿಕ್ಕಮಗಳೂರಿನ ಕಳಸದಲ್ಲಿ ತಲಾ 3 ಸೆಂಮೀ ಮಳೆಯಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.