ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ, ಮುಂದಿನ ನಾಲ್ಕು ದಿನಗಳ ಕಾಲ ಮುಂದುವರಿಯಲಿದೆ. ಉತ್ತರ ಆಂಧ್ರಪ್ರದೇಶ, ದಕ್ಷಿಣ ಒಡಿಶಾ ಹಾಗೂ ಸೌರಾಷ್ಟ್ರ ಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ ಎಸ್ ಪಾಟೀಲ್ ತಿಳಿಸಿದ್ದಾರೆ.
ಈ ಪ್ರಭಾವದಿಂದ ಕರಾವಳಿ ಜಿಲ್ಲೆಗಳು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಜುಲೈ 14ರಿಂದ 17ರವರೆಗೆ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಹೆಚ್ಚಿನ ನಿರೀಕ್ಷೆಯಿದೆ ಎಂದಿದ್ದಾರೆ.
ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳ ಕೆಲವೆಡೆ ಭಾರೀ ಹಾಗೂ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಜುಲೈ 14ರಿಂದ 17ರವರೆಗೆ ಆರೆಂಜ್ ಅಲರ್ಟ್ ನೀಡಲಾಗಿದೆ ಎಂದರು.
ಬೆಳಗಾವಿ, ಧಾರವಾಡ, ಹಾವೇರಿ, ಬೀದರ್, ಕಲಬುರಗಿ, ಯಾದಗಿರಿ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಕೆಲವೆಡೆ ಭಾರೀ ಮಳೆಯನ್ನು ನಿರೀಕ್ಷಿಸಿದ್ದು, ಜುಲೈ 14ರಿಂದ 17ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಸಿ ಎಸ್ ಪಾಟೀಲ್ ತಿಳಿಸಿದ್ದಾರೆ.
ಹಲವೆಡೆ ವ್ಯಾಪಕ ಮಳೆ : ನೈರುತ್ಯ ಮುಂಗಾರು ಕರಾವಳಿಯಲ್ಲಿ ಸಕ್ರಿಯ, ಉತ್ತರ ಒಳನಾಡಿನಲ್ಲಿ ಸಹಜ ಹಾಗೂ ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಉತ್ತರ ಒಳನಾಡಿನಲ್ಲಿ ವ್ಯಾಪಕ ಹಾಗೂ ದಕ್ಷಿಣ ಒಳನಾಡಿನಲ್ಲಿ ಬಹುತೇಕ ಎಲ್ಲ ಸ್ಥಳಗಳಲ್ಲಿ ಮಂಗಳವಾರ ಮಳೆಯಾಗಿದೆ.
ಮುಖ್ಯವಾಗಿ, ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ 9 ಸೆಂ.ಮೀ, ಮಂಗಳೂರಿನ ಪಣಂಬೂರಿನಲ್ಲಿ 8 ಸೆಂ.ಮೀ, ಸುಬ್ರಮಣ್ಯದಲ್ಲಿ 7 ಸೆಂ.ಮೀ. ಮಳೆಯಾಗಿದೆ ಎಂದು ಮಾಹಿತಿ ನೀಡಿದರು.