ಬೆಂಗಳೂರು: ಕೆಲ ದಿನಗಳಿಂದ ತಣ್ಣಗಾಗಿದ್ದ ಮಳೆರಾಯ ಮತ್ತೆ ಅಬ್ಬರಿಸುವ ಸಾಧ್ಯತೆ ದಟ್ಟವಾಗಿದೆ. ನವರಾತ್ರಿ ಹಬ್ಬದ ಸಂಭ್ರಮದಲ್ಲಿರುವ ರಾಜ್ಯದ ಜನತೆಗೆ ನಿರಾಶೆಯಾಗುವ ಸಾಧ್ಯತೆ ಹೆಚ್ಚಿದೆ. ರಾಜ್ಯದಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಮಳೆ ಅಬ್ಬರಿಸಿತ್ತು. ನಂತರ 15 ದಿನ ಬಿಡುವು ಕೊಟ್ಟಿತ್ತು.
ರಾಜಧಾನಿಯಲ್ಲಿ ಇನ್ನೂ ಮೂರು ದಿನ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿಯಲ್ಲಿ ಮಳೆಯ ಸಾಧ್ಯತೆಯಿದೆ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮದಿಂದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಸೆಪ್ಟಂಬರ್ 27 ರಿಂದ 29 ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇಂದು ಬೆಂಗಳೂರಲ್ಲಿ ಅಬ್ಬರಿಸಿದ ಮಳೆ: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರಲ್ಲಿ ಇಂದು ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿದೆ. ಸಿಲಿಕಾನ್ ಸಿಟಿಯಲ್ಲಿ ಮಧ್ಯಾಹ್ನ ಸುಮಾರು ಅರ್ಧ ಗಂಟೆ ಮಳೆಯಾಗಿದೆ. ರಾತ್ರಿ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಾಹನ ಸವಾರರ ಪರದಾಟ: ಶನಿವಾರ ನಗರದಲ್ಲಿ ಮಳೆ ಸುರಿದಿತ್ತು. ಇಂದು ಮಧ್ಯಾಹ್ನ ಮತ್ತೆ ನಗರದಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ. ನಗರದ ಜೆ.ಪಿ ನಗರ, ರಾಮಕೃಷ್ಣ ಆಶ್ರಮ, ಲಾಲ್ ಬಾಗ್, ಮಾವಳ್ಳಿ, ಜೆಸಿ ರೋಡ್ ಹಾಗೂ ಟೌನ್ ಹಾಲ್, ಕಾರ್ಪೋರೇಷನ್, ಮೈಸೂರ್ ಬ್ಯಾಂಕ್ ಸರ್ಕಲ್, ಮಾರ್ಕೆಟ್, ವಿಲ್ಸನ್ಗಾರ್ಡನ್, ಕೋರಮಂಗಲ, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್, ಕಬ್ಬನ್ ಪಾರ್ಕ್ ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ. ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ಹರಿಯುವಂತಾಗಿತ್ತು. ವಾಹನ ಸವಾರರು ಪರದಾಡುವಂತಾಗಿತ್ತು.
(ಓದಿ: ಮಳೆಯ ಆರ್ಭಟದಿಂದ ಭೂಕುಸಿತ.. ಮನೆಯಲ್ಲಿ ಮಲಗಿದ್ದ ನಾಲ್ವರು ಮಕ್ಕಳು ಸೇರಿ ಐವರು ಸಾವು)