ಬೆಂಗಳೂರು: ಇಂದು ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗಿದ್ದು, ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಮುಂಜಾನೆಯಿಂದ ಮೋಡ ಕವಿದ ವಾತಾವರಣ ಇದ್ದು, ಅಲ್ಲಲ್ಲಿ ತುಂತುರು ಮಳೆಯಾಗುತ್ತಿದೆ.
ಹವಾಮಾನ ಮುನ್ಸೂಚನೆ ವಿಭಾಗದ ನಿರ್ದೇಶಕ ಸಿ.ಎಸ್. ಪಾಟೀಲ್ ಈ ಕುರಿತು ಮಾಹಿತಿ ನೀಡಿದ್ದು, ಈಗಿರುವ ಹವಾಮಾನ ಮುನ್ಸೂಚನೆ ಪ್ರಕಾರ, ರಾಮನಾಥಪುರಂ ಜಿಲ್ಲೆಯ ಕರಾವಳಿಗೆ ಇಂದು ಬುರೆವಿ ಚಂಡಮಾರುತ ಪ್ರವೇಶಿಸಿದ್ದು, ಗಾಳಿಯ ವೇಗ ಗಂಟೆಗೆ 50 ರಿಂದ 60 ಕಿಲೋ ಮೀಟರ್ ಇದೆ. ಇದು ಪಶ್ಚಿಮ ದಿಕ್ಕಿನೆಡೆಗೆ ಚಲಿಸಿ ದುರ್ಬಲಗೊಳ್ಳಲಿದೆ. ಇದರ ಪ್ರಭಾವದಿಂದ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದ್ದು, ಡಿ.5 ರಿಂದ 8 ರವರೆಗೆ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದರು.
ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಕೆಲವು ಕಡೆ ಭಾರಿ ಮಳೆ ಆಗಲಿರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿಯಲ್ಲಿ ಇಂದು ಮತ್ತು ನಾಳೆ ಕೆಲವು ಕಡೆ ಮಾತ್ರ ಮಳೆಯಾಗುವ ಸಾಧ್ಯತೆಯಿದೆ ಎಂದು ಅವರು ವಿವವರಿಸಿದರು.