ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಚುರುಕುಗೊಂಡಿದ್ದು, ಅಲ್ಲಲ್ಲಿ ಅವಾಂತರ ಸೃಷ್ಟಿಯಾದ್ರೆ, ಇನ್ನೂ ಹಲವೆಡೆ ಮಳೆರಾಯ ರೈತರು ಹರ್ಷಗೊಳ್ಳುವಂತೆ ಮಾಡಿದ್ದಾನೆ.
ರಾಮನಗರದಾದ್ಯಂತ ಸುರಿದ ಧಾರಾಕಾರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಬಿರುಗಾಳಿ ಸಹಿತ ಮಳೆ ಬಂದಿದ್ದರಿಂದ ಚನ್ನಪಟ್ಟಣದಲ್ಲಿನ ರಸ್ತೆ ಕೆರೆಯಂತಾಗಿದೆ. ಅಲ್ಲದೇ ಚರಂಡಿಯಲ್ಲಿನ ನೀರು ರಸ್ತೆ ಮೇಲೆ ಹರಿದ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆಯಾಯ್ತು.
ಬಿರುಗಾಳಿಗೆ ಎರಡು ಮರಗಳು ನೆಲಕ್ಕುರುಳಿವೆ. ಕೆಂಗಲ್ ವೃತ್ತದ ಬಳಿ ವಿದ್ಯುತ್ ಕಂಬ ನೆಲಕ್ಕುರುಳಿದ್ದು, ಸುದೈವವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಮಳೆಯ ಆರ್ಭಟದಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.
ಗದಗ ಜಿಲ್ಲೆಯಾದ್ಯಂತ ಗುಡುಗು, ಸಿಡಿಲು ಸಹಿತ ಜೋರು ಮಳೆ ಸುರಿಯುತ್ತಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋಜನೂರ ಬಳಿ ಇರೋ ಹಳ್ಳ ತುಂಬಿ ಸೇತುವೆ ರಸ್ತೆ ಮೇಲೆ ನೀರು ಉಕ್ಕಿ ಹರಿದ ಪರಿಣಾಮ ಸಾರಿಗೆ ಸಂಪರ್ಕ ನಿಂತು ಹೋಗಿದೆ.
ಎರಡು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಭಾರೀ ಪ್ರಮಾಣದ ನೀರು ಹಳ್ಳದಲ್ಲಿ ಹರಿಯುತ್ತಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಬಿತ್ತನೆ ಮಾಡಲು ಬೇಕಾದಷ್ಟು ಮಳೆ ಆಗಿದ್ದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.