ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಸಂಜೆ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ. ಭಾರಿ ಮಳೆಗೆ ಹಲವೆಡೆ ಮರಗಳು ಧರಾಶಾಹಿಯಾಗಿವೆ. ದಿಡೀರ್ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಬೆಳಗ್ಗೆಯಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು. ಸಂಜೆಯ ವೇಳೆ ಕೋರಮಂಗಲ, ಮಡಿವಾಳ, ಶಾಂತಿನಗರ, ಬಸವನಗುಡಿ, ಚಾಮರಾಜಪೇಟೆ, ಎಂ.ಜಿ. ರಸ್ತೆ, ಇಂದಿರಾನಗರ, ಶಿವಾಜಿನಗರ, ಹಲಸೂರು, ಗಾಂಧಿನಗರ ಹಾಗೂ ವಿವಿಧೆಡೆ ಮಳೆ ಅಬ್ಬರಿಸಿದೆ.
ಭಾರಿ ಮಳೆಗೆ ರಸ್ತೆಯಲ್ಲಿ ವಾಹನ ಸವಾರರು ಪರದಾಡುವ ದೃಶ್ಯ ಕಂಡು ಬಂತು. ಹಲವೆಡೆ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿತ್ತು. ರಾಜಕಾಲುವೆ ಹಾಗೂ ಚರಂಡಿಯ ತ್ಯಾಜ್ಯ ರಸ್ತೆಗೆ ಬಂದಿತ್ತು. ರಸ್ತೆಯಲ್ಲಿ ತುಂಬಾ ನೀರು ನಿಂತಿದ್ದರಿಂದ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.
ಭಾರಿ ಮಳೆಯಿಂದಾಗಿ ವಾಹನ ದಟ್ಟಣೆ : ಮಳೆಯಿಂದಾಗಿ ಶಿವಾನಂದ ವೃತ್ತ, ಮೆಜೆಸ್ಟಿಕ್ ಬಳಿಯ ರೈಲ್ವೆ ಕೆಳ ಸೇತುವೆಯಲ್ಲಿ ನೀರು ನಿಂತುಕೊಂಡಿದೆ. ಇದರಿಂದಾಗಿ ಇಲ್ಲಿ ವಾಹನ ದಟ್ಟಣೆ ಉಂಟಾಗಿದೆ. ಹೊಸೂರು ರಸ್ತೆ, ಬಳ್ಳಾರಿ ರಸ್ತೆ, ತುಮಕೂರು ರಸ್ತೆ, ಕನಕಪುರ ರಸ್ತೆಯಲ್ಲೂ ಜೋರಾಗಿ ಮಳೆ ಸುರಿದಿದೆ. ಇದರಿಂದಾಗಿ ಇಲ್ಲಿಯೂ ವಾಹನ ದಟ್ಟಣೆ ಕಂಡು ಬಂತು.
ಇನ್ನೆರಡು ದಿನ ಮಳೆ : ದಿಢೀರ್ ಮಳೆ ಸುರಿದ ಹಿನ್ನೆಲೆ ಜನ ಸಾಮಾನ್ಯರು ಪರದಾಡುವ ದೃಶ್ಯ ಕಂಡು. ಇನ್ನೆರಡು ದಿನ ಮಳೆಯ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಗುಡುಗು ಸಹಿತ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಅಲ್ಲದೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಿಗೆ ಇಂದಿನಿಂದ ಮೂರು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆಯ ತಜ್ಞ ಎ. ಪ್ರಕಾಶ್ ಮಾಹಿತಿ ನೀಡಿದರು.
ರಾಜ್ಯದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಚಿಕ್ಕಮಗಳೂರು, ಹಾಸನ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿತ್ರದುರ್ಗ, ಚಾಮರಾಜನಗರ, ಕೊಡುಗು, ಮೈಸೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮೇ 3ರ ವರೆಗೆ ಭಾರಿ ಮಳೆ ಸುರಿಯಲಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ : ರಾಜ್ಯಾದ್ಯಂತ ಮುಂದಿನ 3 ದಿನ ಗುಡುಗು ಸಹಿತ ಮಳೆ: ಕೆಲವೆಡೆ ಯೆಲ್ಲೋ ಅಲರ್ಟ್ ಘೋಷಣೆ