ಬೆಂಗಳೂರು: ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಸೋಮವಾರ ಕೂಡ ಸಂಜೆಯಿಂದಲೇ ವರುಣನ ಆರ್ಭಟ ಜೋರಾಗಿದ್ದು, ನಿರಂತರ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಮುಂಭಾಗ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ಸೋಮವಾರ ಸಂಜೆಯಿಂದ ಬಿಟ್ಟುಬಿಡದೇ ವರುಣನ ಆರ್ಭಟ ಹಿನ್ನೆಲೆ ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉದ್ಭವಿಸಿತ್ತು. ಕೆ.ಆರ್.ಪುರ, ಮಹದೇವಪುರ, ಹೊಸಕೋಟೆ, ಜಾಲಹಳ್ಳಿ, ಯಶವಂತಪುರ, ಮೆಜೆಸ್ಟಿಕ್, ಹೊರಮಾವು, ಬಾಣಸವಾಡಿ ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ. ಮಳೆಯಿಂದ ಚರಂಡಿಗಳು ತುಂಬಿ ಹರಿದಿದ್ದು, ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ತೊಂದರೆ ಅನುಭವಿಸಿದರು.
ಸಂಜೆ ಆಗುತ್ತಿರುವಾಗಲೇ ಮಳೆ ಶುರುವಾಗಿದ್ದರಿಂದ ಕೆಲಸ ಮುಗಿಸಿ ಮನೆಗಳತ್ತ ಹೊರಟಿದ್ದ ಜನರು, ವಾಹನ ಸವಾರರು ಪರದಾಡಿದರು. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ನಗರದಲ್ಲಿ ಮಳೆ ಜೋರಾಗಿದ್ದು, ಮುಂದಿನ ಎರಡು ದಿನಗಳ ಕಾಲ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: RCBಗಾಗಿ ಶೇ.120ರಷ್ಟು ಶ್ರಮಿಸಿದ್ದೇನೆ, ಕೊನೆಯವರೆಗೂ ಬೆಂಗಳೂರು ತಂಡದಲ್ಲೇ ಆಡುವೆ: ಕೊಹ್ಲಿ