ಬೆಂಗಳೂರು: ನಗರದಲ್ಲಿ ರಸ್ತೆಗಳು ಮತ್ತೆ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಎಲ್ಲೆಂದರಲ್ಲಿ ನಡೆಯುತ್ತಿರುವ ಕಾಮಗಾರಿ ಮತ್ತು ಕಳಪೆ ಕಾಮಗಾರಿಗಳೇ ಅದಕ್ಕೆ ಕಾರಣ ಎನ್ನಲಾಗುತ್ತಿದೆ. ಅಕ್ಟೋಬರ್ನಲ್ಲಿ ಸುರಿದ ಧಾರಾಕಾರ ಮಳೆಗೆ ಕಳಪೆ ಗುಣಮಟ್ಟದ ಡಾಂಬರು ರಸ್ತೆಗಳೆಲ್ಲವೂ ಕಿತ್ತುಹೋಗಿದ್ದು, ವಾಹನ ಸಚಾರರು ನರಕಯಾತನೆ ಅನುಭವಿಸುವಂತಾಗಿದೆ.
ಗುಂಡಿ ಮುಚ್ಚಲು, ರಸ್ತೆ ನಿರ್ವಹಣೆಗೆ ಬಿಬಿಎಂಪಿ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಸೆಪ್ಟೆಂಬರ್ ಅಂತ್ಯದೊಳಗೆ ಗುಂಡಿಗಳನ್ನು ಮುಚ್ಚಬೇಕೆಂದು ಬಿಬಿಎಂಪಿ ಆಡಳಿತಾಧಿಕಾರಿ ಹಾಗೂ ಆಯುಕ್ತರು ಆಯಾ ವಲಯಗಳ ಅಧಿಕಾರಿಗಳಿಗೆ ಸೂಚಿಸಿದ್ದರು. ಆದೇಶದ ಮೇರೆಗೆ ಹಲವು ಮುಖ್ಯ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗಿತ್ತು. ಆದರೆ ಮಳೆ ಪ್ರಮಾಣ ಅಧಿಕವಾದ್ದರಿಂದ ಡಾಂಬರು ಸಂಪೂರ್ಣ ಕೊಚ್ಚಿ ಹೋಗಿದೆ.
ಶೇಷಾದ್ರಿಪುರಂ, ನಾಯಂಡನಹಳ್ಳಿ ಜಂಕ್ಷನ್, ಲಗ್ಗೆರೆ ವಾರ್ಡ್, ನಗರ ಹೊರವಲಯದ ವಾರ್ಡ್, ಮೆಟ್ರೋ ಕಾಮಗಾರಿ ನಡೆಯುತ್ತಿರುವ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಹಲವೆಡೆ ತಾತ್ಕಾಲಿಕವಾಗಿ ಮಣ್ಣು, ಪುಡಿ-ಜಲ್ಲಿಯಿಂದ ರಸ್ತೆ ಗುಂಡಿ ಮುಚ್ಚಿ ಡಾಂಬರು ಹಾಕದೆ ಹಾಗೆಯೇ ಬಿಡಲಾಗಿದೆ. ಹೀಗಾಗಿ ಅದೇ ಜಾಗದಲ್ಲೇ ಗುಂಡಿ ಬೀಳುತ್ತಿವೆ.
ಮುಖ್ಯ ಇಂಜಿನಿಯರ್ ಪ್ರಹ್ಲಾದ್ ಈ ಕುರಿತು ಪ್ರತಿಕ್ರಿಯಿಸಿ, ನಗರದ ಮುಖ್ಯ ರಸ್ತೆಗಳನ್ನು ಗುಂಡಿ ರಹಿತ ಮಾಡಲಾಗಿದೆ. ನಾಯಂಡಹಳ್ಳಿ ಜಂಕ್ಷನ್ನಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಡಾಂಬರು ರಸ್ತೆಯ ಗುಂಡಿ ಮುಚ್ಚಿಲ್ಲ ಎಂದರು. ಇನ್ನು ಈವರೆಗೆ ಗುಂಡಿ ಮುಚ್ಚಿರುವ ವಿವರ ಕೇಳಿದಾಗ, ಅಂಕಿ-ಅಂಶ ನೀಡಲು ನಿರಾಕರಿಸಿದ್ದಾರೆ.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಮಳೆ ಬಂದಾಗ ರಸ್ತೆ ಗುಂಡಿ ಮುಚ್ಚುವ ಕೆಲಸ ನಿಲ್ಲಿಸಲಾಗುತ್ತದೆ. ನಿರ್ವಹಣೆ ಅವಧಿಯಲ್ಲಿರುವ ರಸ್ತೆಗಳಲ್ಲಿ ಗುಂಡಿ ಮುಚ್ಚಿರದಿದ್ದರೆ ಗುತ್ತಿಗೆದಾರರಿಗೆ ದಂಡ ಹಾಕಲಾಗುವುದು ಎಂದು ಎಚ್ಚರಿಸಿದರು.
ರಸ್ತೆ ಗುಂಡಿ ಮುಚ್ಚಿದ್ದ ವಿವರ (ಸೆಪ್ಟೆಂಬರ್ ಅಂತ್ಯಕ್ಕೆ)
- ನಗರದ ಒಟ್ಟು ರಸ್ತೆಗಳು - 474
- ಒಟ್ಟು ರಸ್ತೆಗಳ ಉದ್ದ- 1,323 ಕಿ.ಮೀ.
- ರಸ್ತೆ ಗುಂಡಿ ಮುಕ್ತವಾದ ರಸ್ತೆ- 354
- ಇನ್ನೂ ಬಾಕಿ ಇರುವ ರಸ್ತೆ - 459
- ದುರಸ್ತಿ ಮಾಡಬೇಕಾದ ರಸ್ತೆ - 234
- ರಸ್ತೆ ಗುಂಡಿ ಅಗೆಯಲಾಗಿರುವ ರಸ್ತೆ - 236
ವೈಜ್ಞಾನಿಕವಾಗಿ ಗುಂಡಿ ಮುಚ್ಚುವುದರ ಜೊತೆಗೆ ಮುಂದಿನ ದಿನಗಳಲ್ಲಿ ಗುಂಡಿಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಲು ವಲಯವಾರು ಲೇಬರ್ ಟೆಂಡರ್ ಕರೆಯಲು ಆಯುಕ್ತರು ಸೂಚಿಸಿದ್ದರು. ಹೀಗಾಗಿ 27 ಕ್ಷೇತ್ರಗಳಿಗೂ ಡಾಂಬರು ಹಾಕಲು ಯಂತ್ರಗಳು, ಸಿಬ್ಬಂದಿಯನ್ನು ನಿಯೋಜಿಸುವುದು ಸವಾಲಾಗುವ ಹಿನ್ನೆಲೆ ಕ್ಷೇತ್ರವಾರು ಟೆಂಡರ್ ಕರೆಯಲಾಗುವುದು ಎನ್ನಲಾಗಿದೆ. ಆದರೆ ಇನ್ನೂ ಟೆಂಡರ್ ಕರೆದಿಲ್ಲ.