ಬೆಂಗಳೂರು: ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆಗೆ ಆರೋಗ್ಯ ಸಚಿವ ಶ್ರೀರಾಮುಲು ದಾಖಲಾಗಿದ್ದಾರೆ.
ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ರಾಮುಲು ಇಂದು ಕೊರೊನಾ ವೈರಾಣು ದಾಳಿಗೆ ಸಿಲುಕಿದ್ದು, ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜ್ವರದ ಲಕ್ಷಣಗಳಿರುವ ಹಿನ್ನೆಲೆಯಲ್ಲಿ ಸಚಿವರ ಹೆಲ್ತ್ ಬುಲೆಟಿನ್ ಬಂದ ನಂತರವೇ ಯಾವ ಮಾದರಿಯ ಸೋಂಕು ತಗುಲಿದೆ ಎನ್ನುವುದು ಗೊತ್ತಾಗಲಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಹಲವು ಗಣ್ಯರು ಕೊರೊನಾ ಸೋಂಕಿಗೆ ಸಿಲುಕಿ ಖಾಸಗಿ ಆಸ್ಪತ್ರೆಗೆ ದಾಖಲಾದಾಗ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆ ಕೇಳಿಬಂದಿತ್ತು. ಈಗ ರಾಮುಲು ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ಮೂಲಕ ಟೀಕಾಕಾರರಿಗೆ ಉತ್ತರಿಸುವ ಜೊತೆಗೆ ಸರ್ಕಾರಿ ಆಸ್ಪತ್ರೆಯಲ್ಲಿಯೂ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ವಿಶ್ವಾಸ ಜನಸಾಮಾನ್ಯರಲ್ಲಿ ಮೂಡುವಂತೆ ಮಾಡಿದ್ದಾರೆ.