ಬೆಂಗಳೂರು: ಡಯಾಲಿಸಿಸ್ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಮಸ್ಯೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಆಲಿಸಿದರು. ಆರೋಗ್ಯ ಸೌಧದಲ್ಲಿ ಗುರುವಾರ ಸಿಬ್ಬಂದಿಗಳ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಬಿ.ಆರ್.ಎಸ್ನವರು ನೀಡಬೇಕಾಗಿದ್ದ ಬಾಕಿ ವೇತನವನ್ನು 45 ದಿನಗಳ ಒಳಗಾಗಿ ಪಾವತಿಸುವುದಾಗಿ ಸಿಬ್ಬಂದಿಗಳಿಗೆ ಭರವಸೆ ನೀಡಿದರು.
ಇಎಸ್ಐ , ಪಿಎಫ್ ಕುರಿತಂತೆ ಆಗಸ್ಟ್ 31 ರೊಳಗೆ ಕ್ರಮ ಕೈಗೊಳ್ಳುವಂತೆ ಸಂಜೀವಿನಿ ಸಂಸ್ಥೆಯವರಿಗೆ ಸೂಚನೆ ನೀಡಲಾಗಿದೆ. ಡಯಾಲಿಸಿಸ್ ವ್ಯವಸ್ಥೆಯನ್ನು ಮತ್ತಷ್ಟು ಸದೃಢವಾಗಿ ಮಾಡಲು ಲೋಪದೋಷಗಳನ್ನು ಸರಿಪಡಿಸಿಕೊಂಡು ಟೆಂಡರ್ನಲ್ಲಿ ಅಳವಡಿಸಲಾಗುವುದು ಎಂದು ಸಚಿವರು ಹೇಳಿದರು.
108 ಆಂಬ್ಯುಲೆನ್ಸ್ನ ಜಿವಿಕೆ ಸಂಸ್ಥೆ ವಿಚಾರಕ್ಕೆ ಸಂಬಂಧಿಸಿದಂತೆ ಸಮಿತಿ ವರದಿ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಸಿದ ಸಚಿವರು, ತಾಂತ್ರಿಕ ಸಮಿತಿ ರಚಿಸಲಾಗಿದೆ. ಎಂಟು ಅಥವಾ ಹತ್ತು ದಿನದಲ್ಲಿ ಸಮಿತಿ ವರದಿ ನೀಡಲಿದೆ. ಆ ವರದಿ ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದರು.
ಆರೋಗ್ಯ ಸಚಿವರ ಈ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈ ಬಿಟ್ಟು, ಡಯಾಲಿಸಿಸ್ ಕೇಂದ್ರಗಳಲ್ಲಿ ತಮ್ಮ ಕಾರ್ಯ ಮುಂದುವರಿಸಲು ಸಿಬ್ಬಂದಿ ನಿರ್ಧರಿಸಿದ್ದಾರೆ. ಸಭೆಯಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅನೀಲ್ ಕುಮಾರ್, ಎಂ.ಡಿ ಎನ್.ಎಚ್.ಎಮ್ ನವೀನ್ ಭಟ್ ಉಪಸ್ಥಿತರಿದ್ದರು.
ಡಯಾಲಿಸಿಸ್ ಸಿಬ್ಬಂದಿಗಳ ಬೇಡಿಕೆಯಾದರು ಏನು?: ಕಳೆದ ಎರಡು ವರ್ಷಗಳಿಂದ ಸರಿಯಾದ ವೇತನ ಹಾಗೂ ಕೆಲ ಸೌಲಭ್ಯಗಳನ್ನು ನೀಡದಿರುವುದು ಪ್ರತಿಭಟನೆಗೆ ಮುಖ್ಯ ಕಾರಣವಾಗಿತ್ತು. ಇದಲ್ಲದೇ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಯಾಲಿಸಿಸ್ ಘಟಕದ ಸಿಬ್ಬಂದಿ ಪ್ರತಿಭಟನೆ ನಿರ್ಧಾರವನ್ನು ಕೈಗೊಂಡಿದ್ದರು.
ಕಳೆದ ತಿಂಗಳು ಕೂಡ ಪ್ರತಿಭಟನೆಗೆ ಮುಂದಾಗಿದ್ದ ಸಿಬ್ಬಂದಿ: ಈ ಹಿಂದೆ ಕೂಡ ರಾಜ್ಯಾದ್ಯಂತ ಸರ್ಕಾರಿ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಚಿಕಿತ್ಸೆ ಸ್ಥಗಿತಗೊಳ್ಳುವ ಆತಂಕ ತಾತ್ಕಾಲಿಕವಾಗಿ ದೂರವಾಗಿತ್ತು. ಡಯಾಲಿಸಿಸ್ ಹೊಣೆ ಹೊತ್ತ ಸಂಜೀವಿನಿ ಸಂಸ್ಥೆಯ ಸಿಬ್ಬಂದಿ ಸರ್ಕಾರದ ಸಕಾಲಿಕ ಮಧ್ಯಪ್ರವೇಶದಿಂದ ಜೂನ್. 26ರಿಂದ ಪ್ರತಿಭಟನೆಗೆ ಮುಂದಾದವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು.
ಭರವಸೆ ಈಡೇರಿಸಿಲ್ಲ: ಸಿಬ್ಬಂದಿಗಳಿಗೆ ಅನಾರೋಗ್ಯ ಸಮಯದಲ್ಲಿ ಇಎಸ್‌ಐ ಇಲ್ಲದೇ, ಹಣ ಹೊಂದಿಸಲಾಗದೇ ಮೃತಪಟ್ಟ ಘಟನೆಗಳೂ ನಡೆದಿವೆ. ಸಿಗಬೇಕಾದ ವೇತನಕ್ಕಾಗಿ ಕೊಟ್ಟಿರುವ ಭರವಸೆ ಪತ್ರ ಹಿಡಿದು ಹಲವಾರು ಬಾರಿ ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿದ್ದರೂ ಪ್ರಯೋಜನವಿಲ್ಲದಾಗಿದೆ ಎಂದು ರಾಜ್ಯ ಡಯಾಲಿಸಿಸ್ ನೌಕರರ ಸಂಘದ ಅಧ್ಯಕ್ಷ ಎಸ್ ಕೆ ಚೇತನ್ ಹೇಳಿದ್ದರು.
ಇದನ್ನೂ ಓದಿ: ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿಗೆ ಅರ್ಧದಷ್ಟು ಅನುದಾನ ಬಿಡುಗಡೆ ಮಾಡಿಲ್ಲ: ಸಚಿವ ರಾಮಲಿಂಗಾ ರೆಡ್ಡಿ