ಬೆಂಗಳೂರು : ಆರೋಗ್ಯ ಇಲಾಖೆಯು ಏಪ್ರಿಲ್ 18ರಿಂದ 22ರವರೆಗೆ ಒಂದು ದಿನದ ಆರೋಗ್ಯ ಮೇಳವನ್ನ ನಡೆಸಲು ಮುಂದಾಗಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಆಯುಷ್ಮಾನ್ ಭಾರತ್ ಕಾರ್ಯಕ್ರಮ ಪ್ರಾರಂಭಿಸಿದ ನಾಲ್ಕನೇ ವರ್ಷದ ಅಂಗವಾಗಿ ಮೇಳ ಆಯೋಜಿಸಲಾಗುತ್ತಿದೆ. ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಆರೋಗ್ಯ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಮೇಳಗಳಲ್ಲಿ ಸಾರ್ವಜನಿಕರಿಗೆ ರೋಗ ಪತ್ತೆ, ಚಿಕಿತ್ಸೆ ಹಾಗೂ ಆರೋಗ್ಯ ವರ್ಧಕ ಸಲಹೆಗಳನ್ನು ಉಚಿತವಾಗಿ ನೀಡುವ ಗುರಿ ಹೊಂದಿದೆ.
ರಾಜ್ಯಾದ್ಯಂತ 176 ತಾಲೂಕು ಕೇಂದ್ರಗಳಲ್ಲಿ ಒಂದು ದಿನ ಆರೋಗ್ಯ ಮೇಳವನ್ನು ನಡೆಸಲಾಗುತ್ತೆ. ಆರೋಗ್ಯ ಮೇಳದಲ್ಲಿ ಆರೋಗ್ಯ ತಪಾಸಣೆಗೆ ನೋಂದಣಿ, ಡಿಜಿಟಲ್ ಐಡಿ ರಚನೆಯನ್ನು ಉಚಿತವಾಗಿ ಮಾಡಲಾಗುತ್ತೆ. ಆ ಸಾಂಕ್ರಾಮಿಕ ರೋಗಗಳಿಗೆ (ಮಧುಮೇಹ, ಅಧಿಕ ರಕ್ತದೊತ್ತಡ, ಬಾಯಿ, ಗರ್ಭಕೋಶದ ಬಾಯಿ ಮತ್ತು ಸ್ತನ ಕ್ಯಾನ್ಸರ್) ನೋಂದಣಿ, ತಪಾಸಣೆಯನ್ನು ಉಚಿತವಾಗಿ ಮಾಡಲಾಗುವುದು. ಅಗತ್ಯತೆಗೆ ಅನುಸಾರವಾಗಿ ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಲಾಗುತ್ತೆ.
ಆಯುಷ್ಕಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಯಕ್ರಮದಡಿಯಲ್ಲಿ ಆರೋಗ್ಯ ಕಾರ್ಡ್ ವಿತರಣೆ ಮಾಡುವುದು. ಮಹಿಳೆಯರ ತಪಾಸಣೆಗೆ ಪ್ರತ್ಯೇಕ ಸ್ಥಳವನ್ನು ನಿಗಧಿಗೊಳಿಸಿ, ಗೌಪ್ಯತೆಯನ್ನು ಕಾಪಾಡುವುದಲ್ಲದೇ ಎಲ್ಲಾ ಆರೋಗ್ಯ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತೆ. ಕೋವಿಡ್-19 ಮುನ್ನೆಚರಿಕೆ ಲಸಿಕೆ ನೀಡಲು ಪ್ರತ್ಯೇಕ ಬೂತ್ ಸ್ಥಾಪಿಸಿ ಲಸಿಕೆ ನೀಡಲಾಗುತ್ತೆ. ತಾಯಿ ಮತ್ತು ಮಕ್ಕಳ ಆರೋಗ್ಯ, ಮೂಳೆ, ಕಣ್ಣು, ಕಿವಿ, ಮೂಗು, ದಂತ, ಚರ್ಮರೋಗಗಳನ್ನು ಒಳಗೊಂಡಂತೆ ಎಲ್ಲಾ ತಜ್ಞ ವೈದ್ಯರ ಸೇವೆಗಳು ಮೇಳದಲ್ಲಿ ಲಭ್ಯವಿರಲಿದೆ. ಅಲ್ಲದೇ, ಉಚಿತವಾಗಿ ಔಷಧ ಹಾಗೂ ಡಯಾಗ್ನೋಸ್ಟಿಕ್ಸ್‌ಗಳನ್ನ ವಿತರಿಸಲಾಗುತ್ತದೆ.
ಓದಿ: ಇದು ಸೌಹಾರ್ದತೆ.. ಚಿಕ್ಕಮಗಳೂರಿನಲ್ಲಿ ಹಿಂದೂಗಳ ಕುಂಬಾಭಿಷೇಕಕ್ಕೆ ಮಸೀದಿಯಿಂದ ಶುಭ ಹಾರೈಕೆಯ ಫ್ಲೆಕ್ಸ್