ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದರೂ, ಕೊರೊನಾ ವಾರಿಯರ್ಸ್ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಗ್ಯ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದ ಸಿಬ್ಬಂದಿ ಆಕ್ರೋಶ ಹೊರಹಾಕಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಮುಷ್ಕರ ಇಂದು ಕೂಡ ಮುಂದುವರೆದಿದ್ದು, ಸರ್ಕಾರ ಮತ್ತು ನೌಕರರ ನಡುವೆ ನಾ ಕೊಡೆ, ನೀ ಬಿಡೆ ಅನ್ನೋ ಪರಿಸ್ಥಿತಿ ಉಂಟಾಗಿದೆ. ಹೊರ ಗುತ್ತಿಗೆ ನೌಕರರು ಹಲವು ಬಾರಿ ಮನವಿ ಸಲ್ಲಿಸಿ ಮುಷ್ಕರ ನಡೆಸಿದರೂ, ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ನೀಡಿ ಕೈಚೆಲ್ಲಿ ಕೂತಿದೆ. ಹೀಗಾಗಿ, ನಮ್ಮ ಮುಷ್ಕರ ಮುಂದುವರೆಯಲಿದೆ ಎಂದು ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ವಿಶ್ವರಾಧ್ಯ ತಿಳಿಸಿದ್ದಾರೆ.
ನಮ್ಮ ಬೇಡಿಕೆಗಳಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಪ್ರಮುಖವಾಗಿದ್ದು, ಇದನ್ನು ಈಡೇರಿಸುವ ತನಕ ಮುಷ್ಕರ ವಾಪಸ್ ಪಡೆಯುವುದಿಲ್ಲ ಮತ್ತು ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ನೌಕರರು ಪಟ್ಟು ಹಿಡಿದಿದ್ದಾರೆ. ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಇತ್ತ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರವಹಿಸಲು ಇಲಾಖೆಯು ಶಿಸ್ತು ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.
ನೌಕರರ ಮುಷ್ಕರ ಯಾವುದಕ್ಕೆ ವ್ಯತ್ಯಯ:
ಗುತ್ತಿಗೆ- ಹೊರ ಗುತ್ತಿಗೆ ನೌಕರರ ಮುಷ್ಕರದಿಂದಾಗಿ, ಕೋವಿಡ್ ತಪಾಸಣೆ, ಕೋವಿಡ್ ಕಾಲ್ ಸೆಂಟರ್, ಕೋವಿಡ್ ವರದಿ, ಲಸಿಕಾ ಕಾರ್ಯಕ್ರಮ, ತಾಯಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮ, ಕ್ಷಯ ರೋಗ ನಿಯಂತ್ರಣ, ಅಂಧತ್ವ, ಒಳ ಮತ್ತು ಹೊರ ರೋಗಿಗಳ ತಪಾಸಣೆಗೆ ತೊಡಕಾಗಿದೆ. ಸದ್ಯ, ಇಲಾಖೆಯ ಖಾಯಂ ನೌಕರರು ಮಾತ್ರ ಸೇವೆ ಸಲ್ಲಿಸುತ್ತಿದ್ದು, ಅವರಿಗೆ ಹೆಚ್ಚಿನ ಹೊರೆಯಾಗಿದೆ.