ಬೆಂಗಳೂರು: ಕಾಂಗ್ರೆಸ್ ಕೇರ್ಸ್ ನಿಂದ ಆರೋಗ್ಯ ಸೇವೆ ಆರಂಭಿಸುತ್ತೇವೆ. ಬೆಂಗಳೂರಲ್ಲಿ 10 ಆ್ಯಂಬುಲೆನ್ಸ್ ಗಳು ಓಡಾಡುತ್ತವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕೋವಿಡ್ ಸೋಂಕಿತರ ಅನುಕೂಲಕ್ಕೆ ಕೆಪಿಸಿಸಿ ಸಹಾಯವಾಣಿ ಮೂಲಕ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಕಾಂಗ್ರೆಸ್ ರಾಜ್ಯ ನಾಯಕರ ಜತೆ ಇದಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲಾ ಕೇಂದ್ರಗಳಲ್ಲಿ ಆ್ಯಂಬುಲೆನ್ಸ್ ಇರುತ್ತದೆ. ಕೆಪಿಸಿಸಿ ಡಾಕ್ಟರ್ ಸೆಲ್ ನವರು ಜವಾಬ್ದಾರಿ ತೆಗೆದುಕೊಂಡಿದ್ದಾರೆ. ರಾಮಲಿಂಗಾರೆಡ್ಡಿ ಅವರು ಬೆಂಗಳೂರು ವಿಭಾಗದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಸರ್ಕಾರ ಕಾರ್ಪೋರೇಷನ್ ಗಳಿಗೆ ಸೌಲಭ್ಯ ಒದಗಿಸಿಕೊಟ್ಟಿದೆ. ಅದೇ ಮಾದರಿಯಲ್ಲಿ ಕಾಂಗ್ರೆಸ್ ಸೇವೆ ಆರಂಭಿಸಿದೆ. ಪ್ರತಿಯೊಂದು ಆ್ಯಂಬುಲೆನ್ಸ್ ನಲ್ಲಿ ಆಕ್ಸಿಜನ್ ವ್ಯವಸ್ಥೆ ಇದೆ ಎಂದು ವಿವರಿಸಿದರು.
ಕರ್ನಾಟಕ ಸರ್ಕಾರದಲ್ಲಿ ನಂಬಲಾರದ ಘಟನೆ ನಡೆಯುತ್ತಿದೆ. ರಾಜಸ್ಥಾನ ಹಾಗೂ ಚತ್ತಿಸಗಡ್ ಸರ್ಕಾರ ಆರ್ಡರ್ ಮಾಡಿರುವ ರಮ್ಡಿಸಿವಿರ್ ಔಷಧಿ ಬ್ಲಾಕ್ ಮಾಡಲಾಗಿದೆ. ಆದರೆ ಬಿಜೆಪಿ ನಾಯಕರಿಗೆ ಡಬ್ಬದಲ್ಲಿ ತುಂಬಿ ಕಳಿಸುತ್ತಿದ್ದಾರೆ. ಬಿಜೆಪಿ ನಾಯಕರಿಗೇನು ಲೈಸೆನ್ಸ್ ಇದೆ. ಬಿಜೆಪಿ ಶಾಸಕರು ಹಾಗೂ ಎಂಪಿಗಳು ಹೇಗೆ ಔಷಧ ತೆಗೆದುಕೊಳ್ಳಲು ಸಾಧ್ಯ? ಮುಖ್ಯಮಂತ್ರಿಗಳು ಇದಕ್ಕೆ ಉತ್ತರಿಸಬೇಕು. ಕೂಡಲೇ ಬಿಜೆಪಿ ನಾಯಕರ ಮೇಲೆ ಕ್ರಮ ಕೈಗೊಳ್ಳಬೇಕು. ಈ ಔಷಧ ಅವರ ಅಪ್ಪನಮನೆ ಆಸ್ತಿ ಅಲ್ಲ. ಮನೆ ಮನೆಗೆ ಪೋಲಿಯೋ ಮಾದರಿಯಲ್ಲಿ ಲಸಿಕೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರಗಳು ಕೋವಿಡ್ 19 ಮಹಾಮಾರಿಯನ್ನು ಈ ಗಳಿಗೆಯವರೆಗೂ ಕೂಡ ಗಂಭೀರವಾಗಿ ಪರಿಗಣಿಸಿದ್ದಾರೆ ಅಂತ ಅನ್ನಿಸುತ್ತಿಲ್ಲ. ಪ್ರಾಮಾಣಿಕವಾಗಿ ತಡೆಗಟ್ಟಲು ಪ್ರಯತ್ನಿಸಿದ್ದರೆ ದೇಶ, ರಾಜ್ಯದಲ್ಲಿ ಇಂತಹ ಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ. ಪ್ರಧಾನಿಗೆ ಮಾಹಿತಿ ಕೊರತೆ ಇತ್ತೋ ಗೊತ್ತಿಲ್ಲ. ಹೇಳಿಕೆ, ಭರವಸೆ ನೀಡುವಾಗ ಜವಾಬ್ದಾರಿ ಮರೆಯಬಾರದು ಎಂದರು.
ಮೇ 1 ರ ನಂತರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ಸಿಗಲಿದೆ ಎಂದಿದ್ದರು. 3 ಕೋಟಿಗೂ ಅಧಿಕ ಮಂದಿಗೆ ಯಾವುದೇ ಸಿದ್ಧತೆ ಇಲ್ಲದೇ ನೀಡಲು ಮುಂದಾಗಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದು ಎಷ್ಟು ಸರಿ. ನಾವು ಸತ್ಯ ಹೇಳಿದರೆ, ಟೀಕೆ ಮಾಡಿದ್ದಾರೆ ಎನ್ನುತ್ತಾರೆ. ಇದನ್ನು ಅವರೇ ವ್ಯಾಖ್ಯಾನ ಮಾಡುತ್ತಾರೆ. ಆದರೆ ಸರ್ಕಾರ ಇಲ್ಲಿ ಎಡವಿರುವುದು ಸತ್ಯ. ರಾಜ್ಯದಲ್ಲಿ ಈ ಲಸಿಕೆ ಅಭಿಯಾನಕ್ಕೆ 6.5 ಕೋಟಿ ರೂ. ಬೇಕು. 2 ಸಾವಿರ ಕೋಟಿ ರೂ. ಬೇಕು. ಸದ್ಯ 1 ಕೋಟಿ ಮಂದಿಗೆ ಲಸಿಕೆ ವಿತರಿಸಲಾಗಿದೆ. 6.5 ಕೋಟಿ ಲಸಿಕೆ ವಿತರಿಸಲು ಸಿದ್ಧತೆ ಏನಿರಬೇಕೆಂಬ ಮಾಹಿತಿ ಇಲ್ಲದೇ ಹೇಳಿಕೆ ಏಕೆ ನೀಡಬೇಕಿತ್ತು. ನನ್ನ ಮಾಹಿತಿ ಪ್ರಕಾರ ಈ ತಿಂಗಳ ಕೊನೆಯಲ್ಲಿ ಅಗತ್ಯ ಲಸಿಕೆ ಲಭ್ಯವಾಗಲಿದೆ ಎಂದು ಹೇಳಿದರು.
ಈಗ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಳ್ಳುವ ಕಾರ್ಯ ಮಾಡಲಾಗುತ್ತಿದೆ. ಹಳ್ಳಿ ಜನರಿಗೆ ಎಲ್ಲಿಂದ ಆನ್ಲೈನ್ ಸೌಲಭ್ಯ ಸಿಗಲು ಸಾಧ್ಯ? ರಾಜ್ಯ ಸೇರಿದಂತೆ ದೇಶಾದ್ಯಂತ ಮನೆ ಮನೆ ಅಭಿಯಾನ ಮಾಡಬೇಕು. ವ್ಯಾಕ್ಸಿನೇಷನ್ ಆದ್ರೆ ಮಾತ್ರ ರೋಗ ನಿವಾರಣೆ ಸಾಧ್ಯ, ಕನಿಷ್ಠ ಎರಡು ಡೋಸ್ ನೀಡಲೇಬೇಕು. ಲಸಿಕೆ ಪಡೆದವರಿಗೆ ಕೊರೊನಾ ಕಾಡುವ ಸಾಧ್ಯತೆ ಕಡಿಮೆ. ಕರ್ನಾಟಕ ಸರ್ಕಾರ ಲಸಿಕೆ ಹಂಚಿಕೆಯನ್ನು ಎಲ್ಲರಿಗೂ ನೀಡದಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. 18 ವರ್ಷ ಕೆಳಗಿನವರಿಗೂ ಅಗತ್ಯವಿರುವವರಿಗೆ ಲಸಿಕೆ ನೀಡಬೇಕು. ಇದನ್ನು ಸರ್ಕಾರ ಮಾಡಲೇಬೇಕು. ಇಲ್ಲವಾದರೆ ಇವರನ್ನು ವೈಫಲ್ಯ ಕಂಡ ಸರ್ಕಾರ ಎನ್ನಬೇಕಾಗುತ್ತದೆ. 167 ಯೂನಿಟ್ಗಳಿಗೆ ಟೆಂಡರ್ ಕರೆದಿದ್ದಾರೆ ಕಳೆದ ವರ್ಷ ಅಕ್ಟೋಬರ್ ನಲ್ಲಿ ಟೆಂಡರ್ ಕರೆದಿದ್ದಾರೆ. 8 ತಿಂಗಳಲ್ಲಿ ಕೇವಲ 30 ಯೂನಿಟ್ಗಳು ಕಾರ್ಯ ನಿರ್ವಹಿಸಿವೆ. ಇದರಿಂದ ಲಸಿಕೆ ಕೊರತೆ ಎದುರಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಕೇಂದ್ರ ಸರ್ಕಾರ ಉಚಿತ ಲಸಿಕೆ ನೀಡಲಿದೆ. ಇದರಿಂದ ಕೆಳಗಿನ ವಯೋಮಾನದವರಿಗೆ ರಾಜ್ಯ ಸರ್ಕಾರ ಹಣ ಭರಿಸಬೇಕು. 2 ಸಾವಿರ ಕೋಟಿ ರೂ. ಇದಕ್ಕೆ ವೆಚ್ಚ ಆಗಲಿದೆ. ಎಲ್ಲರಿಗೂ ಲಸಿಕೆ ವಿತರಣೆ ಮಾಡುವ ಕಾರ್ಯ ಸರ್ಕಾರದಿಂದ ಆಗುತ್ತಿಲ್ಲ. ರೆಮ್ಡಿಸಿವರ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಇದನ್ನು ತಡೆಯಲು ಆಗದೇ ಸರ್ಕಾರ ನಿಷ್ಕ್ರಿಯವಾಗಿದೆ. ಇವರಿಗೆ ಮನುಷ್ಯತ್ವ ಇದೆಯೋ ಇಲ್ಲವೋ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಾಯಕರು ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ. ಜತೆಗೆ ಜನರ ಸೇವೆ ಹಿಂದೆಯೂ ಕಾರ್ಯ ನಿರ್ವಹಿಸಿದ್ದೇವೆ, ಈಗಲೂ ಕಾರ್ಯನಿರ್ವಹಿಸುತ್ತೇವೆ. ಸಹಾಯವಾಣಿ ಸಹ ಆರಂಭವಾಗಿದೆ. ನಮ್ಮಿಂದ ಏನೇನು ಸಹಾಯ ನೀಡಲು ಸಾಧ್ಯವೋ, ಶಕ್ತಿಮೀರಿ ಪ್ರಯತ್ನ ಮಾಡುತ್ತೇವೆ. ಕಾಯಾ, ವಾಚಾ, ಮನಸಾ ಜನರ ಸೇವೆಗೆ ಬದ್ಧವಾಗಿದ್ದೇವೆ. ಜನರಿಗೆ ಮನವಿ ಮಾಡುತ್ತಿದ್ದು, ಗುಂಪಿಂದ ದೂರವಿರಿ, ವ್ಯಾಕ್ಸಿನೇಷನ್ ಪಡೆಯಿರಿ. ಕಾರ್ಮಿಕರು, ಕಷ್ಟದಲ್ಲಿದ್ದವರಿಗೆ ಕೈಲಾದ ಸಹಾಯ ಮಾಡಿ. ಕರ್ಫ್ಯೂ ಮಾಡಿ 4 ನೇ ದಿನ ಆಯಿತು. ಅದರ ಪರಿಣಾಮ ಏನಾಯ್ರು ಅಂತಾ ಗೊತ್ತಿಲ್ಲ. ಕರ್ಫ್ಯೂ ಆದ ಮೇಲೂ ಕೇಸ್ ಹೆಚ್ಚಾಗ್ತಾ ಇವೆ. ಸರ್ಕಾರ ಕೊರೊನಾ ತಡೆಗಟ್ಟಲು ಪ್ರಮಾಣಿಕ ಕೆಲಸ ಮಾಡಬೇಕು. ಆಗೋಲ್ಲ ಅಂದ್ರೆ ಹೋಗಬೇಕು. ಜನರನ್ನ ಸಾಯಿಸೋ ಕೆಲಸ ಮಾಡಬಾರದು ಸಿದ್ದರಾಮಯ್ಯ ಗುಡುಗಿದರು.