ಬೆಂಗಳೂರು: ಭವಾನಿ ರೇವಣ್ಣ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಯಾರೂ ಯಾರಿಗೂ ಕೇಳಿಲ್ಲ. ಸಿ ಎಂ ಇಬ್ರಾಹಿಂ ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭವಾನಿ ರೇವಣ್ಣಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಕೊಡುವ ಕುರಿತು ನಾವ್ಯಾರು ಏನೂ ಕೇಳಿಲ್ಲ, ಯಾಕೆ ಸುಮ್ನೆ ಇವೆಲ್ಲ ಹೇಳ್ತಾರೋ ಗೊತ್ತಿಲ್ಲ, ಹೆಚ್ ಡಿ ಕುಮಾರಸ್ವಾಮಿಯವರೇ ಶಾಸಕಾಂಗ ಪಕ್ಷದ ನಾಯಕರಾಗಿರುತ್ತಾರೆ. ಸಿಎಂ ಇಬ್ರಾಹಿಂ ಸಾಹೇಬ್ರೆ ಅಧ್ಯಕ್ಷರಾಗಿರುತ್ತಾರೆ ಎಂದು ಸ್ಪಷ್ಟಪಡಿಸಿದರು.
ಪಕ್ಷದ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಪ್ರಜ್ವಲ್ ರೇವಣ್ಣ ಆಕಾಂಕ್ಷಿ ಅಲ್ಲ, ಯುವ ಅಧ್ಯಕ್ಷ ಹುದ್ದೆಯನ್ನೂ ಕೇಳಿಲ್ಲ, ಅದೆಲ್ಲ ಯಾರು ಹೇಳ್ತಾರೋ ಗೊತ್ತಿಲ್ಲ. ನಾಳೆ ಪಕ್ಷದ ಸಭೆ ಇದ್ದು ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಮುಂದುವರೆಯಲಾಗುತ್ತದೆ ಹೆಚ್.ಡಿ ರೇವಣ್ಣ ಎಂದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಪುನರಾಯ್ಕೆಯಾದ ಹೆಚ್ ಡಿ ಕುಮಾರಸ್ವಾಮಿ: ಇನ್ನು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಹೆಚ್. ಡಿ ಕುಮಾರಸ್ವಾಮಿ ಅವಿರೋಧವಾಗಿ ಆಯ್ಕೆಯಾದರು. ವಿಧಾನಸಭೆಯಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕುಮಾರಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಶಾಸಕರೆಲ್ಲಾ ಒಮ್ಮತದಿಂದ ಆಯ್ಕೆ ಮಾಡಿದರು. ನೂತನವಾಗಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಮಾಧ್ಯಮಗೋಷ್ಟಿ ನಡೆಸಿ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿದರು.
ನಾವು ಕೊಟ್ಟ ಮಾತನ್ನು ತಪ್ಪೋದಿಲ್ಲ ಅನ್ನೋ ವೀರಾವೇಶದ ಮಾತನ್ನು ಸಿಎಂ ಆಡಿದ್ದರು. 200 ಯೂನಿಟ್ ಎಲ್ಲರಿಗೂ ಫ್ರೀ, ಫ್ರೀ ಅಂತ ಹೇಳಿ ಈಗ ಗೈಡ್‌ಲೈನ್ ಮಾಡ್ತೀವಿ ಅಂತಿದ್ದಾರೆ. ಅವತ್ತು ವೀರಾವೇಶದ ಮಾತನಾಡಿ, ಚಪ್ಪಾಳೆ ಹೊಡಿಸಿದ್ದೆ, ಹೊಡಿಸಿದ್ದು. ಈಗ ಏನು ಹೇಳ್ತಿದ್ದಾರೆ?. ಸರ್ಕಾರ ರಚನೆಯಾದ ಮೊದಲ ಕ್ಯಾಬಿನೆಟ್‌ನಲ್ಲೇ ಎಲ್ಲಾ ಯೋಜನೆಗಳನ್ನು ಉಚಿತ ಮಾಡುತ್ತೇವೆ ಅಂತ ಹೇಳಿದ್ದರು ಎಂದರು.
ನಿರುದ್ಯೋಗಿ ಪದವಿಧರರಿಗೆ 3 ಸಾವಿರ ರೂಪಾಯಿ ಅಂತ ಹೇಳಿದ್ದರು. ಈಗ ಏನು ಹೇಳ್ತಿದ್ದಾರೆ? ಎದ್ದೇಳು ಕರ್ನಾಟಕ ಅಂತ ಹೇಳ್ತಿದ್ರಲ್ಲ, ಈಗ ಎದ್ದೇಳಿಸಿ. ಹೆಣ್ಣುಮಕ್ಕಳಿಗೆ ಧರ್ಮಸ್ಥಳ, ತಿರುಪತಿ, ಪುಣೆ ಎಲ್ಲ ಫ್ರೀ ಅಂದ್ರಲ್ಲ ಈಗ ಏನ್ ಹೇಳ್ತಿದ್ದಾರೆ. ಇದು ಯಾವಾಗ ಕಾರ್ಯರೂಪಕ್ಕೆ ಬರುತ್ತದೆ ಅನ್ನೋದನ್ನ ಕಾದು ನೋಡೋಣ. ಇವರ ಸುಳ್ಳಿನ ಆಟ ಇದ್ಯಲ್ಲ ಅದರ ಮುಂದೆ ನಮ್ಮ ಪಕ್ಷದ ಹೋರಾಟದ ಸ್ವರೂಪ ಇರಲಿದೆ ಎಂದು ಹೆಚ್ಡಿಕೆ ಹೇಳಿದರು.
ಕುಮಾರಸ್ವಾಮಿ ಪ್ರಮಾಣ ವಚನ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಇಂದು ಬೆಳಗ್ಗೆ ಹಂಗಾಮಿ ಸ್ಪೀಕರ್ ಆರ್ ವಿ ದೇಶಪಾಂಡೆ ಅವರಿಂದ ವಿಧಾನಸಭೆಯ ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಸ್ಪೀಕರ್ ಅವರ ಕಚೇರಿಯಲ್ಲಿ ಪ್ರಮಾಣ ಸ್ವೀಕಾರ ನಡೆಯಿತು.
ಇದನ್ನೂ ಓದಿ:ಯು ಟಿ ಖಾದರ್ ಅವರ ಮುಂದಾಳತ್ವದಲ್ಲಿ ಸದನದ ಚರ್ಚೆ ಮೇಲ್ಮಟ್ಟಕ್ಕೇರಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ