ಬೆಂಗಳೂರು : ಚುನಾವಣೋತ್ತರ ಸಮೀಕ್ಷೆಯಂತೆ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಕಾಂಗ್ರೆಸ್ನ ಈ ಜಯದ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ನಮ್ಮ ರಾಜ್ಯದ ಕಾಂಗ್ರೆಸ್ ನಾಯಕರ ಪ್ರಚಾರದಿಂದ ಅಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಇಲ್ಲಿಂದ ಅಲ್ಲಿಗೆ ರವಾನೆಯಾದ ಹಣದಿಂದ ಗೆದ್ದಿದ್ದಾರೆ. ನಾನಾ ರೀತಿಯ ತೀರ್ಮಾನಗಳಿಂದ ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಜೆಡಿಎಸ್ ಪಕ್ಷ ರಾಜ್ಯ ವ್ಯಾಪಿ ಕೈಗೊಂಡಿದ್ದ ಬರ ಅಧ್ಯಯನ ವರದಿಯನ್ನು ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಸಲ್ಲಿಸಿದರು. ರಾಜಭವನಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ನಿಯೋಗ ಔಪಚಾರಿಕವಾಗಿ ರಾಜ್ಯಪಾಲರ ಜೊತೆ ಕೆಲಕಾಲ ಬರ ಸ್ಥಿತಿಗತಿ ಕುರಿತು ಚರ್ಚಿಸಿತು. ಅಧ್ಯಯನ ವರದಿ ಸಲ್ಲಿಸಿ ಬರ ಪರಿಹಾರ ಕುರಿತು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಿದೆ.
ಇದನ್ನೂ ಓದಿ : ರಾಜ್ಯ ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವ: ದೇಶ ಯಾರ ಕೈಯಲ್ಲಿದ್ದರೆ ಒಳ್ಳೆಯದು ಎಂದು ಜನ ತೀರ್ಮಾನಿಸಿದ್ದಾರೆ: ಅಶೋಕ್
ರಾಜ್ಯಪಾಲರ ಭೇಟಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲ್ಲಲು ನಾನಾ ಕಾರಣಗಳಿವೆ. ಅದು ಅಲ್ಲಿಯ ಕಾಂಗ್ರೆಸ್ ಶಕ್ತಿಯಲ್ಲ. ಕರ್ನಾಟಕ ಕಾಂಗ್ರೆಸ್ ನಾಯಕರ ಪ್ರಚಾರವೂ ಕಾರಣವಲ್ಲ. ಇಲ್ಲಿಂದ ರವಾನೆಯಾದ ಆರ್ಥಿಕ ಚೀಲಗಳು ಕಾರಣ. ಅಲ್ಲಿನ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ಬರೋದಕ್ಕೆ ಯಾವೆಲ್ಲ ಬೆಳವಣಿಗೆಗಳು ಆದವು ಅನ್ನೋದು ಗೊತ್ತಿದೆ. ಐದಕ್ಕೆ ಐದು ರಾಜ್ಯಗಳನ್ನು ಆವರಿಸಿಕೊಂಡು ಬಿಡುತ್ತೇವೆ ಅನ್ನೊ ಕಾಂಗ್ರೆಸ್ ನಾಯಕರ ಮಾತಿಗೆ ಜನ ತೀರ್ಪು ನೀಡಿದ್ದಾರೆ ಎಂದರು.
ಜೆಡಿಎಸ್ ಪಕ್ಷದ ಶಾಸಕರು ಹಾಗು ಮಾಜಿ ಶಾಸಕರು ಜಿಲ್ಲಾ ಪದಾಧಿಕಾರಿಗಳು ಪ್ರವಾಸ ಮಾಡಿ ಬರ ಅಧ್ಯಯನ ವರದಿಯನ್ನು ಸಿದ್ಧಪಡಿಸಿದ್ದಾರೆ. ಬರ ವಿಚಾರವಾಗಿ ರೈತರ ಮೇಲಿನ ದುಷ್ಪರಿಣಾಮಗಳು ಏನು? ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ನಮ್ಮ ಪಕ್ಷದ ಗ್ರೌಂಡ್ ರಿಯಾಲಿಟಿಯ ವರದಿಯನ್ನು ರಾಜ್ಯಪಾಲರಿಗೆ ನೀಡಿದ್ದೇವೆ. ಕೇಂದ್ರ ಗೃಹ ಸಚಿವರು, ಪ್ರಧಾನಿ ಹಾಗೂ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರ ಮೂಲಕ ಸಲ್ಲಿಸಿದ್ದೇವೆ. ಆದಷ್ಟು ಬೇಗ ಎನ್ಡಿಆರ್ಎಫ್ ನಿಂದ ಹಣ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯದ ಪರವಾಗಿ ಮನವಿ ಮಾಡುತ್ತೇನೆ ಎಂದು ರಾಜ್ಯಪಾಲರು ಹೇಳಿದ್ದಾರೆ ಎಂದು ಹೆಚ್ಡಿಕೆ ತಿಳಿಸಿದರು.
ಇದನ್ನೂ ಓದಿ : 4 ರಾಜ್ಯಗಳ ಚುನಾವಣಾ ಫಲಿತಾಂಶ, ಕರ್ನಾಟಕ ಕಾಂಗ್ರೆಸ್ಗೂ ಎಚ್ಚರಿಕೆ ಗಂಟೆ: ಬಸವರಾಜ ಬೊಮ್ಮಾಯಿ