ಬೆಂಗಳೂರು: ಬಿಜೆಪಿ ಸರ್ಕಾರ ಬಂದ ಮೇಲೆ ರಾಮನಗರ ಜಿಲ್ಲೆಯಲ್ಲಿ ಎಷ್ಟು ಅಭಿವೃದ್ಧಿ ಆಗಿದೆ ಎಂದು ಬಹಿರಂಗ ಚರ್ಚೆ ಮಾಡೋಣ ಬನ್ನಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಚಿವ ಅಶ್ವತ್ಥನಾರಾಯಣ್ಗೆ ಸವಾಲು ಹಾಕಿದ್ದಾರೆ.
ಟ್ವೀಟ್ ಮೂಲಕ ರಾಮನಗರ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ್ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಬಹಿರಂಗ ಚರ್ಚೆ ಮಾಡೋಣ. ಆಗ ಯಾರ ಆತ್ಮಸಾಕ್ಷಿ ಏನು ಎಂಬುದು ಜನರಿಗೂ ತಿಳಿಯುತ್ತದೆ. ʼಎಂಎಲ್‌ಸಿ ಕೋರಿಕೆ ಮೇರೆಗೆ..ʼ ಎಂದು ಬಿಡುಗಡೆ ಮಾಡಿದ 50 ಕೋಟಿ ರೂ. ಒಳಗುಟ್ಟಿನ ಬಗ್ಗೆಯೂ ಚರ್ಚಿಸೋಣ ಬನ್ನಿ. ನಾನು ತಯಾರಿದ್ದೇನೆ. ಅಭಿವೃದ್ಧಿ ಕೆಲಸ ಎಂದರೇನು ಅಶ್ವತ್ಥನಾರಾಯಣ್ ?, ವಾಮಮಾರ್ಗ ಎಂದರೆ ಯಾವುದು? ಇವೆರಡರಲ್ಲೂ ತಮಗೆ ಒಳ್ಳೆಯ ಅನುಭವ ಇದೆ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಸಿ ಪಿ ಯೋಗೇಶ್ವರ್ ಮೇಲೆ ಮೊಟ್ಟೆ, ಕಲ್ಲು ಎಸೆದ ಜೆಡಿಎಸ್ ಕಾರ್ಯಕರ್ತರು.. ಪೊಲೀಸರಿಂದ ಲಾಠಿಚಾರ್ಜ್
ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು 'ಕಳ್ಳಮಾರ್ಗ'ದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲು ಹೊರಟಿದ್ದು, ಕ್ಷೇತ್ರದ ಶಾಸಕರನ್ನೇ ಕತ್ತಲೆಯಲ್ಲಿ ಇಟ್ಟಿದ್ದನ್ನು ಏನೆಂದು ಕರೆಯಬೇಕು?, ಇದೇನಾ ನೀವು ಹೇಳುವ ರಾಜಮಾರ್ಗ? ಎಂದು ಪ್ರಶ್ನಿಸಿದ್ದಾರೆ.
'ಅಧಿಕಾರವೂ ತಪ್ಪಬಾರದು, ಅಭಿವೃದ್ಧಿಯೂ ಆಗಬಾರದು' ಎಂದು ನಾನು ಭಾವಿಸಿದ್ದಿದ್ದರೆ ನೀವು ಮಲ್ಲೇಶ್ವರದಲ್ಲಿ ಶಾಸಕರೇ ಆಗುತ್ತಿರಲಿಲ್ಲ. ಆ ದಿನಗಳನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಅಭಿವೃದ್ಧಿ ಬಗ್ಗೆ ಉಪದೇಶ ಮಾಡಿದ್ದೀರಿ, ನಿಮ್ಮ ಮಾದರಿಯಲ್ಲಿ ಅಭಿವೃದ್ಧಿ ಮಾಡಿಕೊಳ್ಳುವುದು ನನಗೆ ಗೊತ್ತಿಲ್ಲ, ನನ್ನಿಂದ ಆಗುವುದೂ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಜನರಿಗೆ ನನ್ನಿಂದ ಮೋಸ ಸಾಬೀತಾದ್ರೆ ರಾಜಕೀಯ ನಿವೃತ್ತಿಗೆ ಸಿದ್ಧ: ಹೆಚ್ಡಿಕೆ
ಅಶ್ವತ್ಥನಾರಾಯಣ್ ಅವರೇ, ಅಧಿಕಾರ ಬರುತ್ತದೆ, ಹೋಗುತ್ತದೆ ಎಂದು ವೇದಾಂತ ಹೇಳಿದ್ದೀರಿ. ಹೌದು, ಇಂಥ ಉದಾತ್ತ, ಆದರ್ಶ ಚಿಂತನೆಯ, ವಿಶಾಲ ಹೃದಯ ವೈಶಾಲ್ಯವುಳ್ಳ ನಿಮ್ಮಂಥ ಪ್ರಾಜ್ಞರೇ ಆಪರೇಶನ್ ಕಮಲ ಎಂಬ ಪಾಪ ಎಸಗಿದ್ದೇಕೆ?. ನಮ್ಮ ಶಾಸಕರ ಮನೆಯಲ್ಲಿ ಹಣ ಇಟ್ಟು ಬಂದಿದ್ದು ಯಾಕೆ? ಎಂದು ಕುಟುಕಿದ್ದಾರೆ.
ಅಧಿಕಾರ ಬೇಕಿದ್ದರೆ ನೀವು ಚುನಾವಣೆಯಲ್ಲಿ ಪೂರ್ಣ ಬಹುಮತ ಸಿಗುವವರೆಗೂ ಕಾಯಬಹುದಿತ್ತಲ್ಲವೇ? ಆದರೆ, ಹಪಾಹಪಿಯಿಂದ 'ಅಡ್ಡಮಾರ್ಗ' ಹಿಡಿದಿದ್ದು ಏಕೆ?, ಅಕ್ಕಪಕ್ಕದ ಪಕ್ಷಗಳ ಶಾಸಕರನ್ನು ಅಪಹರಿಸಿ ಆಪರೇಷನ್ ಕಮಲದ ಸರ್ಕಾರ ಮಾಡಿದ್ದು ಯಾಕೆ?. ಇದು ವಾಮಮಾರ್ಗವೋ? ಸನ್ಮಾರ್ಗವೋ? ಸ್ಪಲ್ಪ ಹೇಳಿ ಎಂದು ತಿರುಗೇಟು ನೀಡಿದ್ದಾರೆ.
ಸಚಿವ ಅಶ್ವತ್ಥನಾರಾಯಣ್ ತಿರುಗೇಟು: ರಾಹುಕಾಲ ಯಾರಿಗೆ ಬಂದಿದೆ ಎಂಬುದನ್ನು ಕುಮಾರಸ್ವಾಮಿ ನೋಡ್ಕೋಬೇಕು. ನಮಗೆ ಒಳ್ಳೆಯ ಕಾಲ ಸದ್ಯದಲ್ಲೇ ಬರಲಿದೆ ಎಂದು ಸಚಿವ ಅಶ್ವತ್ಥನಾರಾಯಣ್ ತಿರುಗೇಟು ನೀಡಿದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ಘಟನೆಯನ್ನು ಮೊದಲು ಖಂಡಿಸುತ್ತೇನೆ. ಕಾರ್ಯಕ್ರಮದ ಮೊದಲ ಆಹ್ವಾನ ಪತ್ರಿಕೆಯಲ್ಲಿ ಯೋಗೀಶ್ವರ್ ಅನುದಾನದ ಅಡಿಯಲ್ಲಿ ಬಂದಿರೋ ಹಣ ಅಂತ ಮುದ್ರಣ ಮಾಡಲಾಗಿತ್ತು. ಬಳಿಕ ಅದನ್ನು ಬದಲಾವಣೆ ಮಾಡಿ ಕುಮಾರಸ್ವಾಮಿಯವರಿಗೆ ಕಾರ್ಯಕ್ರಮದ ಅಧ್ಯಕ್ಷತೆ ನೀಡಲಾಗಿತ್ತು. ಕುಮಾರಸ್ವಾಮಿ ಏಕೆ ಕಾರ್ಯಕ್ರಮಕ್ಕೆ ಹೋಗಿಲ್ಲ. ಅನುದಾನವನ್ನು ಸಿಎಂ ಬಳಿ ಮಾತನಾಡಿ ತಂದಿದ್ದು ಎಂದು ಯೋಗೀಶ್ವರ್ ವಿವರಿಸಿದರು. ನಾನು ರಾಮನಗರ ಉಸ್ತುವಾರಿ ಸಚಿವನಾಗಿದ್ದೇನೆ. ಅವರು ಹಕ್ಕುಪತ್ರ ಎಲ್ಲಾ ಕೊಟ್ಟಿದ್ದಾರೆ. ನಾನು ಅದನ್ನು ಅಡ್ಡಿಪಡಿಸಿದ್ದೇನಾ?. ಇಲ್ಲ. ಹಾಗಾಗಿ, ನಿನ್ನೆಯ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕಿತ್ತು ಎಂದರು.