ಬೆಂಗಳೂರು : ಪ್ರಧಾನಿಯನ್ನಾದರೂ ಕರೆಸಿಕೊಳ್ಳಲಿ, ಅಮೆರಿಕ ಅಧ್ಯಕ್ಷರನ್ನಾದರೂ ಕರೆಸಿಕೊಳ್ಳಲಿ, ನನಗೇನೂ ಆತಂಕ ಇಲ್ಲ, ಒಂದು ದಿನ ಭಾಷಣ ಮಾಡಿ ಹೋಗಬಹುದಲ್ವಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಜೆಪಿ ನಗರದ ತಮ್ಮ ನಿವಾಸದ ಬಳಿ ಇಂದು ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚನ್ನಪಟ್ಟಣಕ್ಕೆ ಮಂಡ್ಯ, ತುಮಕೂರಿನಿಂದ, ಮೈಸೂರಿನಿಂದ ಜನ ಕರೆಸಬಹುದು. ಒಂದು ದಿನ ಜಾತ್ರೆ ಮಾಡಿ ಹೋಗಬಹುದು. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ, ಹೀಗೆ ಆಗಿದೆ ಅವರ ಕಥೆ. ಅದನ್ನು ಹೊರತುಪಡಿಸಿ ಜನಕ್ಕೆ ಅನುಕೂಲ ಆಗುವ ಕಾರ್ಯಕ್ರಮ ಯಾವುದಾರೂ ಮಾಡ್ತಾರಾ?. ಇಲ್ಲ ಅವರೇನು ಮಾಡಿದ್ದಾರಾ?, ಚುನಾವಣೆ ಹೊತ್ತಿನಲ್ಲಿ ಬರ್ತಾರೆ, ಹೋಗುತ್ತಾರೆ ಎಂದು ಕುಟುಕಿದರು.
ನನ್ನ ಕಾರ್ಯಕ್ರಮದ ವಿಶೇಷತೆಗಳೇ ಬೇರೆಯಾಗಿತ್ತು:-ಕುಮಾರಸ್ವಾಮಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ ಕೂಡ ಗಮನಿಸಿದ್ದೇನೆ. ನಾನು ನಾಲ್ಕು ತಿಂಗಳಿನಿಂದ ನಡೆಸಿದ ರೋಡ್ ಶೋಗಳ ಮುಂದೆ ಇದೇನಿಲ್ಲ. ಬಿಜೆಪಿ, ಕಾಂಗ್ರೆಸ್ ರೋಡ್ ಶೋಗಳು ಏನೇನು ಇಲ್ಲ. ನನ್ನ ಕಾರ್ಯಕ್ರಮದ ವಿಶೇಷತೆಗಳೇ ಬೇರೆಯಾಗಿತ್ತು. ಅವರ ಕಾರ್ಯಕ್ರಮ ನನ್ನ ಕಾರ್ಯಕ್ರಮಕ್ಕೆ ಸರಿಸಾಟಿ ಅಲ್ಲ ಎಂದರು.
ಇದನ್ನೂ ಓದಿ: ಪ್ರಧಾನಿ - ಅದಾನಿಗೂ ಇರುವ ಸಂಬಂಧ ಏನು?: ಮತ್ತೆ ಪ್ರಶ್ನೆ ಮಾಡಿದ ರಾಹುಲ್ ಗಾಂಧಿ
ಭ್ರಷ್ಟಾಚಾರದ ಬಗ್ಗೆ ನಾನ್ಯಾಕೆ ಮಾತನಾಡಲಿ - ಹೆಚ್ ಡಿಕೆ: ಮಾಜಿ ಸಿಎಂ ಸಿದ್ದರಾಮಯ್ಯ, ಲಿಂಗಾಯತ ಮುಖ್ಯಮಂತ್ರಿ ಸಂಬಂಧ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದೆಲ್ಲ ದೊಡ್ಡವರ ವಿಚಾರ. ನಮಗ್ಯಾಕೆ?, ಭ್ರಷ್ಟಾಚಾರದ ಬಗ್ಗೆ ನಾನ್ಯಾಕೆ ಮಾತನಾಡಲಿ, ಇಬ್ಬರೂ ಸೇರಿ ಮಾತನಾಡಿಕೊಳ್ತಿದ್ದಾರೆ. ಅವರಿಗೇ ಬಿಟ್ಟುಬಿಡೋಣ. ನಮ್ಮ ಬಗ್ಗೆ ಭ್ರಷ್ಟಾಚಾರದ ಬಗ್ಗೆ ಯಾರೂ ಪ್ರಶ್ನೆ ಮಾಡಿಲ್ಲ ಎಂದು ಹೇಳಿದರು.
ಇಂದು ಮೈಸೂರು ಪ್ರವಾಸಕ್ಕೆ ತೆರಳುವ ಮುನ್ನ ಮಾತನಾಡಿದ ಹೆಚ್ ಡಿಕೆ, ವೈದ್ಯರು ಮೂರು ದಿನ ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಆದರೆ, ನಾನು ವಿಶ್ರಾಂತಿ ಪಡೆಯುವ ಸ್ಥಿತಿಯಲ್ಲಿ ಇಲ್ಲ, ಕೆಲಸದ ಒತ್ತಡ ಇದೆ. ಇವತ್ತು ಮೈಸೂರಿನ ಕೆ.ಆರ್.ಕ್ಷೇತ್ರ, ಚಾಮರಾಜನಗರ, ವರುಣಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತೇನೆ. ಇವತ್ತಿನಿಂದ ಮೇ 8 ರವರೆಗೆ ನಿರಂತರ ಪ್ರಚಾರ ನಡೆಸುತ್ತೇನೆ ಎಂದು ತಿಳಿಸಿದರು.
ಇದನ್ನು ಓದಿ: ಹುಬ್ಬಳ್ಳಿಯಲ್ಲಿ ಅಮಿತ್ ಶಾ ಗೌಪ್ಯ ಸಭೆ.. ಖಾಸಗಿ ಹೋಟೆಲ್ಗೆ ಆಗಮಿಸಿದ ಸಿಎಂ ಬೊಮ್ಮಾಯಿ
ಕ್ಷೇತ್ರಗಳ ಗುರಿ ಮುಟ್ಟಲು ಇಳಿ ವಯಸ್ಸಲ್ಲಿ ಶ್ರಮ ಹಾಕುತ್ತಿದ್ದಾರೆ: ನನ್ನ ಆರೋಗ್ಯದ ಬಗ್ಗೆ ದೇವೇಗೌಡರಿಗೆ ಸ್ವಲ್ಪ ಆತಂಕ ಇದೆ. ನಿನ್ನೆಯಿಂದ ಮೂರು ಕಡೆ ಬಿಸಿಲಿನಲ್ಲಿ ಶಿರಾ, ಮಧುಗಿರಿ ಕೊರಟಗೆರೆ ಸಭೆಗಳಲ್ಲಿ ದೇವೇಗೌಡರು ಭಾಗಿಯಾಗಿದ್ದಾರೆ. ಇವತ್ತು ಪಿರಿಯಾಪಟ್ಟಣ, ಕೆ.ಆರ್.ನಗರಕ್ಕೆ ಹೊರಟಿದ್ದಾರೆ. 123 ಕ್ಷೇತ್ರಗಳ ಗುರಿ ಮುಟ್ಟಲು ಇಳಿ ವಯಸ್ಸಲ್ಲಿ ಅವರು ಶ್ರಮ ಹಾಕ್ತಿದ್ದಾರೆ ಎಂದು ಹೇಳಿದರು.