ಬೆಂಗಳೂರು: ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ್ದ ಐದು ಗ್ಯಾರಂಟಿ ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರ್ಕಾರ ನುಡಿದಂತೆ ಸಂಪೂರ್ಣವಾಗಿ ನಡೆಸಿಲ್ಲ ಎಂದು ಹೇಳುವುದಿಲ್ಲ, ಪ್ರಯತ್ನ ಪಟ್ಟಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಗ್ಯಾರಂಟಿಗಳ ಅನುಷ್ಠಾನಕ್ಕೆ ನಮ್ಮ ತಕರಾರು ಇಲ್ಲ. ಆದರೆ, ಕೊಟ್ಟ ಮಾತಿನಂತೆ ನಡೆಯಲು ಪ್ರಯತ್ನಗಳು ನಡೆಯುತ್ತಿವೆ ಅವುಗಳನ್ನು ಮುಂದುವರೆಸಿ ಎಂದರು.
ಗ್ಯಾರಂಟಿಯಿಂದ ಕಾಂಗ್ರೆಸ್‍ಗೆ ಲಾಭವಾಗಿದೆ ಎಂಬುದನ್ನು ವಿಶ್ಲೇಷಿಸುವುದಿಲ್ಲ. ನುಡಿದಂತೆ ನಡೆದಿದ್ದೇವೆ ಎಂದಿದ್ದಾರೆ. ಆ ನಿಟ್ಟಿನಲ್ಲಿ ಸ್ವಲ್ಪ ಪ್ರಯತ್ನ ಪಟ್ಟಿದ್ದಾರೆ. ಎಲ್ಲ ನಿರುದ್ಯೋಗಿ ಪದವೀಧರರಿಗೂ 3000 ರೂ. ನೀಡುವುದಾಗಿ ಹೇಳಿ ಈಗ ಷರತ್ತು ವಿಧಿಸುತ್ತಿದ್ದಾರೆ. ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿ ಅನುಷ್ಠಾನಕ್ಕೆ ತರುವಾಗ ವಾರ್ಷಿಕ ಸರಾಸರಿ ಆಧರಿಸಿ ಜಾರಿ ಮಾಡಲಾಗುತ್ತಿದೆ. ಸರಾಸರಿ ವಿದ್ಯುತ್ ಬಳಕೆಯ ಜತೆಗೆ ಶೇ.10ರಷ್ಟು ಹೆಚ್ಚುವರಿಯಾಗಿ ನೀಡುವುದಾಗಿ ಹೇಳಿದ್ದಾರೆ. ಇದರಿಂದ ಜನರು ಗೊಂದಲಕ್ಕೆ ಒಳಗಾಗಿದ್ದಾರೆ. ಇದನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಎಲ್ಲ ಗ್ರಾಹಕರು ಇನ್ನೂ ನೋಂದಣಿ ಮಾಡಿಸಿಲ್ಲ: 2.14 ಕೋಟಿ ಗ್ರಾಹಕರಿದ್ದಾರೆ. ಇದುವರೆಗೂ ಅಷ್ಟು ಪ್ರಮಾಣದಲ್ಲಿ ಗೃಹಜ್ಯೋತಿಗೆ ನೋಂದಣಿ ಮಾಡಿಲ್ಲ. ಅವರಿಗೆ ತಿಳಿವಳಿಕೆ ಇದೆಯೋ ಇಲ್ಲವೋ ಗೊತ್ತಿಲ್ಲ. ಎಲ್ಲ ಗ್ರಾಹಕರನ್ನು ಯೋಜನೆ ವ್ಯಾಪ್ತಿಗೆ ತಂದು ಸೌಲಭ್ಯ ಕಲ್ಪಿಸುವ ಬಗ್ಗೆ ಕಾರ್ಯಕ್ರಮ ರೂಪಿಸಬೇಕು. ದೇಶದಲ್ಲಿ ಬಡತನ ನಿವಾರಣೆಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ಹಲವು ಸರ್ಕಾರಗಳು ಗಮನ ಹರಿಸಿವೆ. ಆಂಧ್ರಪ್ರದೇಶದಲ್ಲಿ ಎರಡು ರೂ.ಗೆ ಕೆಜಿ ಅಕ್ಕಿ ಕೊಡುವುದು ಮೊದಲಿಗೆ ಪ್ರಾರಂಭವಾಯಿತು ಎಂದರು.
ರಿಯಾಯಿತಿ ದರದಲ್ಲಿ ಪಡಿತರ ಯೋಜನೆ ಜಾರಿಗೆ ತಂದಿದ್ದು ರಾಮಕೃಷ್ಣ ಹೆಗಡೆ: ಇದನ್ನು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದಾಗ ರಾಜ್ಯದಲ್ಲೂ ಜಾರಿಗೆ ತರಲಾಯಿತು. ಆನಂತರ ಬಂದ ಕಾಂಗ್ರೆಸ್ ಸರ್ಕಾರ ನಿಲ್ಲಿಸಿತ್ತು. 1994ರಲ್ಲಿ ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ 10 ಕೆಜಿ ಅಕ್ಕಿಯನ್ನು ಪ್ರತಿ ಕೆಜಿಗೆ 3.20ರೂ. ದರದಲ್ಲಿ ನೀಡಲಾಯಿತು. ನಗರ ಮತ್ತು ಗ್ರಾಮೀಣ ಭಾಗದ ಬಡವರಿಗೆ ಪ್ರತಿ ಕೆಜಿಗೆ ಮೂರು ರೂ.ದರಲ್ಲಿ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡಲು ಪ್ರಾರಂಭಿಸಿತು ಎಂದು ಸದನದ ಗಮನ ಸೆಳೆದರು.
2013ರಲ್ಲಿ ಒಂದು ರೂಗೆ ಪ್ರತಿ ಕೆಜಿ ಅಕ್ಕಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ ಬಳಿಕ ಉಚಿತವಾಗಿ ನೀಡಲು ಆರಂಭಿಸಿದರು. ಈಗ 10 ಕೆಜಿ ಅಕ್ಕಿ ಪ್ರತಿ ಯುನಿಟ್‍ಗೆ ಕೊಡುವ ಘೋಷಣೆ ತಪ್ಪಲ್ಲ. 2018ರಲ್ಲಿ ಮಂಡಿಸಿದ ಬಜೆಟ್‍ನಲ್ಲಿ ರಾಜ್ಯದಲ್ಲಿ ಹಸಿವು ಮುಕ್ತವಾಗಿರುವುದಾಗಿ ಹೇಳಿದ್ದಾರೆ. ಜನರು ಚೆನ್ನಾಗಿರಲಿ ಎಂಬ ಕಾರಣಕ್ಕೆ ಪ್ರತಿಯೊಬ್ಬರಿಗೆ ಐದು ಕೆಜಿ ಹೆಚ್ಚುವರಿಯಾಗಿ ಅಕ್ಕಿ ನೀಡುವ ಘೋಷಣೆ ಮಾಡಿದ್ದಾರೆ. ಅದರ ಬಗ್ಗೆ ತಕರಾರಿಲ್ಲ ಎಂದರು.
ಅಕ್ಕಿ ದೊರೆಯುತ್ತಿಲ್ಲ ಎಂದು ಫಲಾನುಭವಿಗಳ ಬ್ಯಾಂಕ್ ಖಾತೆ ಐದು ಕೆಜಿ ಅಕ್ಕಿಯ ಬದಲು ತಲಾ 170 ರೂ. ನೀಡುವುದಾಗಿ ಘೋಷಿಸಿದ್ದಾರೆ. ಅದಕ್ಕೂ ತಕರಾರು ಇಲ್ಲ ಎಂದು ಹೇಳಿದರು. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಕೋವಿಡ್ ನಂತರದ ದಿನಗಳಲ್ಲಿ ಶೇ.30ರಷ್ಟು ಗ್ರಾಮಗಳಿಗೆ ಬಸ್ ಸೌಲಭ್ಯ ಕಡಿತಗೊಳಿಸಲಾಗಿದೆ. ಬಸ್ ಸಂಖ್ಯೆ ಹೆಚ್ಚಳ ಮಾಡಬೇಕು. ಯೋಜನೆಯಿಂದ ಶಾಲಾ - ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಅವರಿಗಾಗಿ ಪರ್ಯಾಯ ಸೌಲಭ್ಯ ಕಲ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಇದನ್ನೂ ಓದಿ: ಗ್ಯಾರಂಟಿ ಹಣ ಭರಿಸಲು ಸರ್ಕಾರಿ ಭೂಮಿ ಮಾರಾಟ ಇಲ್ಲ: ಕೃಷ್ಣ ಬೈರೇಗೌಡ