ಬೆಂಗಳೂರು : ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಪೋಷಕರು, ಶಿಕ್ಷಕರು ಹಾಗೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇನ್ನೂ 2 ರಿಂದ 3 ತಿಂಗಳು ಶಾಲೆ ಪ್ರಾರಂಭ ಮಾಡುವುದು ಬೇಡ ಎಂದು ಸಲಹೆ ನೀಡಿದ್ದಾರೆ
ಕೊರೊನಾ ಸೋಂಕು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಹರಡುತ್ತಿರುವ ಬಗ್ಗೆ ಎಚ್ಚರಿಸಿ ವಿದ್ಯಾಗಮ ಯೋಜನೆ ನಿಲ್ಲಿಸಬೇಕು. ಇಲ್ಲದಿದ್ದರೆ ಅಹೋರಾತ್ರಿ ಧರಣಿ ನಡೆಸುವುದಾಗಿ ಹೆಚ್ಡಿಕೆ ಬೆಳಗ್ಗೆ ಸರ್ಕಾರಕ್ಕೆ ಎಚ್ಚರಿಸಿದ್ದರು.
ಜೆಪಿ ನಗರದ ತಮ್ಮ ನಿವಾಸದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೆ. ಹಾಗಾಗಿ ಯೋಜನೆಯನ್ನು ಸ್ಥಗಿತಗೊಳಿಸಿದ್ದಾರೆ. ಶಾಲಾ - ಕಾಲೇಜುಗಳನ್ನು ಆರಂಭ ಮಾಡಬೇಕು ಎಂದು ಸರ್ಕಾರ ನಿರ್ಧಾರ ಮಾಡಿದಾಗ ಮಾಧ್ಯಮಗಳು ಜನಾಭಿಪ್ರಾಯ ಸಂಗ್ರಹ ಮಾಡಿದ್ದವು. ಈಗ ಶಾಲೆಗಳನ್ನು ಪ್ರಾರಂಭ ಮಾಡುವುದನ್ನು ಮುಂದೂಡಿ, ಪರಿಣಿತರ ಸಲಹೆ ಪಡೆಯಲು ಮುಂದಾಗಿದೆ. ವಿದ್ಯಾಗಮ ಯೋಜನೆಯ ಮೂಲಕ ಮಕ್ಕಳನ್ನು ವಠಾರ, ದೇವಸ್ಥಾನಗಳಲ್ಲಿ ಪಾಠ ಹೇಳುವುದನ್ನೂ ಸರ್ಕಾರ ಪ್ರಾರಂಭಿಸಿದೆ. ನಿನ್ನೆಯಿಂದ ಈ ಯೋಜನೆಯಲ್ಲಿ ಆಗುತ್ತಿರುವ ಅನಾಹುತಗಳನ್ನು ಮಾಧ್ಯಮಗಳು ತೋರಿಸುತ್ತಿವೆ. ಇದು ಕೂಡ ಸರ್ಕಾರ ವಿದ್ಯಾಗಮ ಯೋಜನೆ ವಾಪಸ್ ಪಡೆಯಲು ಕಾರಣವಾಗಿದೆ ಎಂದರು.
ಕೊರೊನಾ ಸಮಸ್ಯೆಯಿಂದಾಗಿ ಅರ್ಧ ಶೈಕ್ಷಣಿಕ ವರ್ಷ ಮುಗಿದಿದೆ. ಶಿಕ್ಷಕರಿಗೆ ಸಿಗಬೇಕಾದ ಸೌಲಭ್ಯಗಳು ಸಿಗಲೇಬೇಕು. ವಿದ್ಯಾರ್ಥಿಗಳಿಗೆ ರಿಯಾಯಿತಿ ಕೊಟ್ಟು ಪಾಸ್ ಮಾಡುವುದರಿಂದ ಏನೂ ಆಗದು. ಈಗಾಗಲೇ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆ ಆಗಿದೆ. ಎಸ್ಎಸ್ಎಲ್ ವರೆಗೂ ಎಲ್ಲ ಮಕ್ಕಳನ್ನು ಪಾಸ್ ಮಾಡಿ. ಕೊರೊನಾ ಹಿನ್ನೆಲೆ ಈ ಶೈಕ್ಷಣಿಕ ವರ್ಷ ರಿಯಾಯಿತಿ ನೀಡಿ ಎಂದು ಹೆಚ್ಡಿಕೆ ಒತ್ತಾಯಿಸಿದರು.
ಕಾಂಗ್ರೆಸ್ನ ಕಾರ್ಯಕರ್ತರಿಗೆ ಹಸಿರು ಶಾಲು ಹಾಕಿಸಿ, ಮಂಡ್ಯದಲ್ಲಿ ರೈತ ಸಮಾವೇಶ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರು. ಆಗ ಯಾವ ಕಾಂಗ್ರೆಸ್ ನಾಯಕರೂ ರೈತರ ಕುಟುಂಬಗಳ ಬಳಿ ಹೋಗಲಿಲ್ಲ. ಜೆಡಿಎಸ್ ಪಕ್ಷ ಹೋಗಿ ಪರಿಹಾರ ನೀಡಿತ್ತು. ನಮ್ಮದು ರೈತರ ಪರ ಕಾಳಜಿ ಇರುವ ಪಕ್ಷ, ಇವರು ಮಂಡ್ಯದಿಂದ ಇಂಡಿಯಾ ಹಿಡಿಯಲು ಹೊರಟಿದ್ದಾರೆ. ರೈತರು ದಡ್ಡರಲ್ಲ. ಅವರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ವಾಗ್ದಾಳಿ : ಸಿದ್ದರಾಮಯ್ಯ ರೈತರ ಸಾಲ ಮುನ್ನಾ ಘೋಷಣೆ ಮಾಡಿದರು. ಆದರೆ, ಅರ್ಹ ಫಲಾನುಭವಿಗಳಿಗೆ ತಲುಪಲಿಲ್ಲ. ಯಾರಿಗೆ ಬೇಕಾದರೂ ಚಾಲೆಂಜ್ ಮಾಡುವೆ. ನನ್ನ ಕಾಲದಲ್ಲಿ ರೈತರ ಸಾಲ ಮನ್ನಾ ವಿಚಾರ ದುರುಪಯೋಗ ಆಗಿದ್ದರೆ ರಾಜಕೀಯ ನಿವೃತ್ತಿ ಪಡೆಯುವೆ. ಈಗ ರೈತರನ್ನು ಹುಡಿಕೊಂಡು ಹೊರಟಿದ್ದಾರೆ. ಏನು ಮಾಡುತ್ತಾರೋ ನೋಡೋಣ. ಕೊರೊನಾ ನಂತರ ನಾನೂ ಹೋರಾಟ ಮಾಡುವೆ. ನಮ್ಮ ಜವಾಬ್ದಾರಿ ನಿರ್ವಹಣೆ ಮಾಡಬೇಕು. ಕೇವಲ ಪ್ರಚಾರಕ್ಕೆ ಮಾಡುವುದಿಲ್ಲ. ಸಂತೆಯಲ್ಲಿ ನಿಂತು ಮಾತಾಡುವುದಲ್ಲ. ಪ್ರತಿ ಪಕ್ಷ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ವಾಗ್ದಾಳಿ ನಡೆಸಿದರು.
ಮತ್ತೆ ಒಕ್ಕಲಿಗ ಪಾಲಿಟಿಕ್ಸ್ ಪ್ರಸ್ತಾಪಿಸಿದ ಕುಮಾರಸ್ವಾಮಿ ಅವರು, ಈ ಹಿಂದೆ ಒಕ್ಕಲಿಗರನ್ನು ತೆಗೆದಿದ್ದರು. ಈಗ ಒಕ್ಕಲಿಗರನ್ನು ಗೆಲ್ಲಿಸಿ ಎಂದು ಹೋಗಿದ್ದಾರೆ. ಯಾರಿಗೆ ಬೇಕಾದರೂ ಟೋಪಿ ಹಾಕ್ತಾರೆ. ತಮ್ಮ ಅನುಕೂಲಕ್ಕೆ ಜಾತಿ ಬಳಕೆ ಮಾಡಿಕೊಳ್ಳುತ್ತಾರೆ ಎಂದು ಡಿಕೆಶಿ ವಿರುದ್ಧ ಪರೋಕ್ಷವಾಗಿ ತಿರುಗೇಟು ನೀಡಿದರು.
ಆರ್ ಆರ್. ನಗರಕ್ಕೆ ಅಭ್ಯರ್ಥಿ ನಾಳೆ ಅಂತಿಮ : ಶಿರಾ, ರಾಜರಾಜೇಶ್ವರಿನಗರ ಕ್ಷೇತ್ರಗಳ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಆರ್ ಆರ್ ನಗರದಲ್ಲಿ ನಮ್ಮ ಪಕ್ಷದ ಬೇಸ್ ಇದೆ. ನಾಳೆ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುತ್ತಿದ್ದು, ಸೋಮವಾರ ನಮ್ಮ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದರು.