ಬೆಂಗಳೂರು : ಪಂಚರತ್ನ ರಥಯಾತ್ರೆ ಕಾರ್ಯಕ್ರಮವನ್ನು ಮಳೆ ನಿಂತ ಮೇಲೆ ಪ್ರಾರಂಭಿಸಲಾಗುವುದು. ಶೀಘ್ರದಲ್ಲೇ ಕಾರ್ಯಕ್ರಮದ ದಿನಾಂಕ ನಿಗದಿ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಜೆಪಿ ನಗರದ ತಮ್ಮ ನಿವಾಸಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ಸೊಸೆ ಹಾಗೂ ಮೊಮ್ಮಗನ ಜೊತೆ ಗಣೇಶನ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಳೆ ನಿಂತ ಮೇಲೆ ಸರಿಯಾದ ಮೂಹೂರ್ತ ಹಿಡಿದು ಪಂಚರತ್ನ ಕಾರ್ಯಕ್ರಮ ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದರು.
ಮುಂದಿನ ತಿಂಗಳು ಪಿತೃಪಕ್ಷ, ದಸರಾ ಇದೆ. ಒಂದು ಸಾರಿ ಪ್ರಾರಂಭ ಮಾಡಿದರೆ 120-130 ಕ್ಷೇತ್ರದಲ್ಲಿ ಈ ರಥಯಾತ್ರೆ ಸಾಗಲಿದೆ. ಹೀಗಾಗಿ ಸರಿಯಾದ ಸಮಯ ನೋಡಿ ಪ್ರಾರಂಭಿಸುವುದಾಗಿ ಹೇಳಿದ ಅವರು, ಪ್ರವಾಸದ ವೇಳೆ ಗ್ರಾಮ ವಾಸ್ತವ್ಯ ಮಾಡುತ್ತೇನೆ. ಅಲ್ಲದೆ, ಗ್ರಾಮ ವಾಸ್ತವ್ಯದಲ್ಲಿ 14-15 ಕಾರ್ಯಕ್ರಮಗಳು ಇರಲಿವೆ ಎಂದು ಹೆಚ್ಡಿಕೆ ಮಾಹಿತಿ ನೀಡಿದರು.
ರಾಮನಗರ ಮಳೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸಿಎಂ ರಾಮನಗರಕ್ಕೆ ಭೇಟಿ ನೀಡಿದ್ದರು. ಅವರಿಗೆ ನಿಜವಾದ ಸಮಸ್ಯೆ ಅರಿವಾಗಿದೆ. ಎಲ್ಲವನ್ನು ಅರಿತಿದ್ದಾರೆ. ಎನ್ಡಿಆರ್ಎಫ್ ನಿಯಮದಂತೆ ಪರಿಹಾರ ಕೊಟ್ಟರೆ ಅಲ್ಲಿ ಸಮಸ್ಯೆ ಪರಿಹಾರ ಆಗುವುದಿಲ್ಲ. ಹೀಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಮನವಿ ಮಾಡಿದ್ದೇವೆ ಎಂದು ಹೇಳಿದರು.
ರೇಷ್ಮೆ ನೂಲು ಸರ್ವ ನಾಶ ಆಗಿದೆ. ಮೂಲಭೂತ ಸೌಕರ್ಯಗಳು ಹಾಳಾಗಿದೆ, ಮನೆಗಳು ಬಿದ್ದಿವೆ. ಅದಕ್ಕೆ ದೊಡ್ಡ ಪರಿಹಾರ ಕೊಡಬೇಕಾಗಿದೆ. ಸಿಎಂ ಪರಿಹಾರ ಕೊಡುವ ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಪರಿಹಾರ ಕೊಡಬೇಕು. ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಇದೊಂದು ದೊಡ್ಡಮಟ್ಟದ ಆಪತ್ತು: ಯಶಸ್ಸು ಪಡೆಯಬೇಕಾದರೆ ವಿನಾಯಕನಲ್ಲಿ ಕೇಳುವುದು, ಹಬ್ಬದ ಸಂದರ್ಭದಲ್ಲಿ ನಾಡಿಗೆ ಬಂದಿರುವ ದೊಡ್ಡಮಟ್ಟದ ಆಪತ್ತು. ಪ್ರಕೃತಿಯ ವಿಕೋಪದಲ್ಲಿ, ದೊಡ್ಡಮಟ್ಟದ ಅನಾಹುತಗಳಾಗಿವೆ. ಮತ್ತೊಂದೆಡೆ ಸಮಾಜದಲ್ಲಿ ಸಂಘರ್ಷ ವಾತಾವರಣ ಉಂಟು ಮಾಡಲು ಕೆಲವು ಶಕ್ತಿಗಳು ಪ್ರಯತ್ನ ಮಾಡುತ್ತಿರುವುದು ಕಂಡಿದ್ದೇವೆ. ಈ ಎರಡು ವಿಚಾರದಲ್ಲಿ ಭಗವಂತ ಸಮಾಜದಲ್ಲಿ ಶಾಂತಿ ನೆಲೆಸುವ ರೀತಿಯಲ್ಲಿ ಗಣೇಶನ ಅನುಗ್ರಹ ದೊರಕಲಿ ಎಂದು ಪ್ರಾರ್ಥಿಸಿದರು.
ಸಂಸದ ಪ್ರತಾಪ ಸಿಂಹಗೆ ತಿರುಗೇಟು: ರಾಮನಗರದಲ್ಲಿ ಭಕ್ಷಿ ಕೆರೆ ಒಡೆಯಲು ಕಾರಣ ಏನು? ಭಕ್ಷಿ ಕೆರೆ ಒಡೆದಿದ್ದಕ್ಕೆ ರಾಮನಗರದಲ್ಲಿ ನೀರಿನ ಪ್ರವಾಹ ಕಂಡಿದ್ದು. ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕ ಕೆಲಸ ಆಗಿದೆ. ನೀರು ಎಲ್ಲೂ ಹೋಗಲು ಸಾಧ್ಯವಿಲ್ಲ. ಕೆಲಸ ಮಾಡಬೇಕಾದರೆ ಸಿಕ್ಕ ಸಿಕ್ಕ ಕಡೆ ಕ್ವಾರಿ ಮಾಡಿದ್ದಾರೆ. ಸಿಕ್ಕ ಸಿಕ್ಕ ಕಡೆ ಮಣ್ಣು ಎತ್ತಿದ್ದಾರೆ. ರಾಜಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಯಲು ಅವಕಾಶವಿಲ್ಲ. ಭಕ್ಷಿ ಕೆರೆಗೆ ನಿರೀಕ್ಷೆಗೂ ಮೀರಿ ನೀರು ಬರಲು ಹೆದ್ದಾರಿಯೇ ಕಾರಣ ಎಂದರು.
ನೀರು ಹೋಗಲು ಜಾಗವಿಲ್ಲ, ಅದನ್ನು ನೋಡಿ ಹೇಳಿದ್ದೇನೆ. ಈ ಮಹಾನುಭಾವ ರಸ್ತೆ ಕೆಲಸಕ್ಕೆ ಶ್ರಮಪಟ್ಟು ನಿರ್ವಹಣೆ ಮಾಡಿದ್ದೇನೆ ಎಂದು ಪೋಸ್ ಕೊಟ್ಟರು. ವೇಗವಾಗಿ ಕೆಲಸ ನಡೆಯಲು ನಾನು ಸಿಎಂ ಆಗಿದ್ದಾಗ ಭೂ ಸ್ವಾಧೀನಕ್ಕಾಗಿ ಎಂಟು ಬಾರಿ ಸಭೆ ಮಾಡಿದ್ದೇನೆ. ರೈತರ ಮನವೊಲಿಸಿದ್ದಕ್ಕೆ ಪರಿಹಾರ ಕಲ್ಪಿಸಿದ್ದಕ್ಕೆ ಕೆಲಸದಲ್ಲಿ ವೇಗ ಕಂಡಿದ್ದೇವೆ. ಇವರು ಹೋಗಿ ರಸ್ತೆಯಲ್ಲಿ ನಿಂತು ಫೋಟೋ ತೆಗಿಸಿದಕ್ಕೆ ಅಲ್ಲ. ಇವರಿಗೆ ಪರಿಜ್ಞಾನ ಇದ್ದರೇ, ನೀರು ಯಾಕೆ ನುಗ್ಗಿತು ಎಂದು ತಿಳಿದುಕೊಳ್ಳಲಿ ಎಂದು ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದರು.
ನವೆಂಬರ್ ತಿಂಗಳೊಳಗೆ ಫ್ಲೈಟ್ ರಸ್ತೆಗೆಗಿಳಿಸಬೇಕು ಎಂದಿದ್ದರು. ಮಳೆ ಅನಾವುತ ಆಗಿದೆ. ಈ ರೀಪೇರಿ ವರ್ಕ್ ಆಗಬೇಕಲ್ಲ. ರಾಮನಗರದಲ್ಲಿ ಏನೋ ಆಯಿತಪ್ಪ ಓಕೆ. ಹೈವೇ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿದೆ. ನೀರು ಹೋಗಲು ಎಲ್ಲಿ ವ್ಯವಸ್ಥೆ ಮಾಡಿದ್ದಾರೆ? ಮಾತನ್ನು ಎಲ್ಲರೂ ಮಾತನಾಡಬಹುದು, ಆದ್ರೆ ಅದರಿಂದ ಕೆಲಸ ಆಗಲ್ಲ. ಸಮಸ್ಯೆ ಎಲ್ಲಿದೆ, ಹೇಗೆ ಸರಿ ಪಡಿಸಬೇಕು ಎಂಬುದರ ಬಗ್ಗೆ ತಿಳಿಯಬೇಕು. ಮಂಡ್ಯ ಸಂಸದರಿಗೂ ಮತ್ತು ಪ್ರತಾಪ್ ಸಿಂಹ ಅವರ ಮಧ್ಯೆ ಕ್ರೆಡಿಟ್ ವಾರ್ ನಡೆದಿತ್ತು. ಹಣೆಬರಹ ಎಲ್ಲಿಗೆ ಬಂದಿದೆ, ಅದನ್ನು ಸರಿಪಡಿಸಿಕೊಳ್ಳಪ್ಪ ಎಂದು ಹೆಚ್ಡಿಕೆ ತಿವಿದರು.
ಆದೇಶ ಉಲ್ಲಂಘನೆ ಸಲ್ಲದು: ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ವಿಚಾರದಲ್ಲಿ ಎಲ್ಲರೂ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು. ಯಾರು ಆದೇಶ ಉಲ್ಲಂಘನೆ ಮಾಡಬಾರದು. ಹಬ್ಬಗಳನ್ನು ಆಚರಣೆ ಮಾಡೋರು ಪರಿಶುದ್ಧ ಮನಸ್ಸಿನಿಂದ ಆಚರಿಸಬೇಕು. ಇದರಲ್ಲಿ ಪೈಪೋಟಿ ಬೇಡ. ಯಾರು ಜಿದ್ದಿಗೆ ಬಿದ್ದು ಹಬ್ಬ ಆಚರಿಸಬಾರದು. ಸರ್ವ ಜನಾಂಗದ ಶಾಂತಿಯ ತೋಟದಂತೆ ಕೆಲಸ ಮಾಡಬೇಕು. ಯಾರು ಗಲಾಟೆ ಮಾಡಿಕೊಂಡು ಹಬ್ಬ ಆಚರಣೆ ಮಾಡೋದು ಬೇಡ ಎಂದು ಕುಮಾರಸ್ವಾಮಿ ಮನವಿ ಮಾಡಿದರು.
ತಂದೆ-ತಾಯಿ ಆಶೀರ್ವಾದ ಪಡೆದ ಮಾಜಿ ಸಿಎಂ: ಪದ್ಮನಾಭ ನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸಕ್ಕೆ ತೆರಳಿ ವಿನಾಯಕನ ಪೂಜೆಯಲ್ಲಿ ಪಾಲ್ಗೊಂಡ ಕುಮಾರಸ್ವಾಮಿ ಅವರು, ತಂದೆ-ತಾಯಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ನಾಡಿನ ಜನರಿಗೆ ಗಣೇಶೋತ್ಸವದ ಶುಭಾಶಯ ಕೋರಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, 13-14 ವರ್ಷಗಳಿಂದ ಈ ಮನೆಯಲ್ಲಿ ವಿಶೇಷ ಪೂಜೆ ಮಾಡಿಕೊಂಡು ಬರುತ್ತಿದ್ದೇವೆ. ದೇವರ ಅನುಗ್ರಹದಿಂದ ನಾನು ಇವತ್ತು ಪೂಜೆ ಮಾಡುವ ಹಾಗೆ ಹಾಗಿದೆ. ಇಷ್ಟು ಸುಧಾರಣೆ ಆಗುತ್ತೇನೆಂದು ನಾನು ಅಂದುಕೊಂಡಿರಲಿಲ್ಲ. ನಾನು ಅನೇಕ ಕಷ್ಟಗಳನ್ನು ಅನುಭವಿಸಿದ್ದೇನೆ. ಮುಂದಿನ ದಿನಗಳಲ್ಲಿ ನನ್ನ ಹೋರಾಟಕ್ಕೆ ಗಣಪತಿ ಶಕ್ತಿ ಕೊಡುವ ನಂಬಿಕೆ ಇದೆ ಎಂದು ಗೌಡರು ಆಶಾಭಾವನೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಿಹಾರದಲ್ಲಿ ನಿತೀಶ್ ಕುಮಾರ್ ಭೇಟಿ ಮಾಡಿದ ತೆಲಂಗಾಣ ಸಿಎಂ ಕೆಸಿಆರ್: ಹೊಸ ರಾಜಕೀಯ ಸಮೀಕರಣ