ಬೆಂಗಳೂರು: ಹಿಜಾಬ್ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆಗೊಳಿಸಿರುವ ವಿಚಾರಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಪ್ರತಿಕ್ರಿಯೆ ನೀಡಿದ್ದು, ವಾದ -ಪ್ರತಿವಾದಗಳನ್ನು ಕೇಳಿದ ನ್ಯಾಯಮೂರ್ತಿಗಳು ವಿಸ್ತ್ರುತ ನ್ಯಾಯಪೀಠಕ್ಕೆ ವರ್ಗಾವಣೆ ಮಾಡಿದ್ದಾರೆ. ತೀರ್ಪು ಕೊಡಲು ಕಾಲಾವಕಾಶ ಆಗಬಹುದು. ಹೀಗಾಗಿ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದಿದ್ದಾರೆ.
ನಗರದ ಪುರಭವನದಲ್ಲಿ ಆಯೋಜಿಸಿದ್ದ ಕನ್ನಡ ಮನಸ್ಸುಗಳ ಮುಕ್ತ ಮಾತುಕತೆ ಸಂವಾದ ಕಾರ್ಯಕ್ರಮದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಾಲಾ -ಕಾಲೇಜುಗಳಿಗೆ ಸರ್ಕಾರ ಈಗ ಮೂರು ದಿನಗಳ ರಜೆ ಘೋಷಣೆ ಮಾಡಿದೆ. ಆರಂಭದಲ್ಲಿಯೇ ಸರ್ಕಾರ ಇದನ್ನು ಮೊಟಕುಗೊಳಿಸಿದ್ದರೆ ಇದು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ಈ ಬೆಳವಣಿಗೆ ಹಿಂದೆ ಮುಸ್ಲಿಂ ಪರ ಹಾಗೂ ಹಿಂದೂ ಪರದ ಎರಡೂ ಸಂಘಟನೆಗಳಿವೆ. ನಾವೆಲ್ಲರೂ ಕೂಡಿ ಬದುಕಬೇಕಿದೆ. ಹಾಗಾಗಿ, ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ನಮ್ಮ ರಾಷ್ಟ್ರಧಜ್ವವನ್ನು ಕೆಳಗಿಳಿಸುವುದು ಯಾರಿಂದಲೂ ಸಾಧ್ಯವಿಲ್ಲ. ರಾಷ್ಟ್ರಧ್ವಜ ನಮ್ಮನ್ನು ಒಗ್ಗೂಡಿಸಿದೆ. ಅದನ್ನು ನಾಶ ಮಾಡುವುದು ದೇಶವನ್ನೇ ನಾಶ ಮಾಡಿದಂತೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಹೆಚ್ಡಿಕೆ ತಿರಗೇಟು ನೀಡಿದರು.