ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕೇವಲ ಇನ್ನೆರಡು ತಿಂಗಳು ಮಾತ್ರ ಇದ್ದು, ಯಾವಾಗ ಬೇಕಾದರೂ ಚುನಾವಣೆ ದಿನಾಂಕ ಪ್ರಕಟ ಆಗಬಹುದು. ಆದ್ದರಿಂದ ಎಲ್ಲ ಘೋಷಿತ ಅಭ್ಯರ್ಥಿಗಳು ವೇಗವಾಗಿ ಜನರನ್ನು ತಲುಪುವ ಕೆಲಸ ಮಾಡಬೇಕು. ಯಾರಾದರೂ ಉದಾಸೀನ ಮಾಡಿದರೆ ಅಂಥ ಅಭ್ಯರ್ಥಿಗಳನ್ನು ಮುಲಾಜಿಲ್ಲದೇ ಬದಲಾವಣೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಖಡಕ್ ಸೂಚನೆ ಕೊಟ್ಟಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಕರೆಯಲಾಗಿದ್ದ ಮೊದಲ ಪಟ್ಟಿಯಲ್ಲಿರುವ 93 ಅಭ್ಯರ್ಥಿಗಳ ಸಭೆಯಲ್ಲಿ ಮಾತನಾಡಿದ ಅವರು, 61 ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ಮುಗಿಸಿ ಬೆಂಗಳೂರಿಗೆ ವಾಪಸಾದ ನಂತರ ಅಭ್ಯರ್ಥಿಗಳ ಸಭೆ ಕರೆದಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಇನ್ನು ಎರಡು ತಿಂಗಳು ಅಭ್ಯರ್ಥಿಗಳು ಸಾಗಬೇಕಾದ ಗೆಲುವಿನ ಹಾದಿಯ ಬಗ್ಗೆ ದಿಕ್ಸೂಚಿ ನಿಗದಿ ಮಾಡಿದರು. ಅಲ್ಲದೇ, ಮನೆ ಮನೆಗೂ ಪಂಚರತ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದ ಮೂಲಕ ಜನರ ಬಳಿಗೆ ತಲುಪಲು ಅಭ್ಯರ್ಥಿಗಳಿಗೆ ಟಾಸ್ಕ್ ನೀಡಲಾಗಿದೆ.
ಮುಂದಿನ ಎರಡೂವರೆ ತಿಂಗಳು ಅಭ್ಯರ್ಥಿಗಳು ವಾರಕ್ಕೆ ಕೊನೆಯ ಪಕ್ಷ ಮೂರು ದಿನ ವಿವಿಧ ಗ್ರಾಮಗಳಲ್ಲಿ ವಾಸ್ತವ್ಯ ಹೂಡಬೇಕು ಎಂದು ಅವರು ಅಭ್ಯರ್ಥಿಗಳಿಗೆ ತಾಕೀತು ಮಾಡಿದರು. ಕೆಲ ಅಭ್ಯರ್ಥಿಗಳು ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ, ಕೆಲವರು ಇನ್ನೂ ಟೇಕಾಫ್ ಆಗಿಲ್ಲ ಎಂದು ಟೇಕಾಫ್ ಆಗದ ಅಭ್ಯರ್ಥಿಗಳಿಗೆ ಚಾಟಿ ಬೀಸಿದ ಕುಮಾರಸ್ವಾಮಿ ಅವರು, ಪಂಚರತ್ನ ರಥಯಾತ್ರೆ ಯಶಸ್ಸಿನ ಬಗ್ಗೆ ಹಾಗೂ ಸ್ಪಂದನೆ ಬಗ್ಗೆ ಅಭ್ಯರ್ಥಿಗಳಿಗೆ ಮಾಹಿತಿ ನೀಡಿದರು.
ಈ ಅವಕಾಶವನ್ನು ಎಲ್ಲ ಅಭ್ಯರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು:ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಪರ ಅಲೆ ಎದ್ದಿದೆ, ಈ ಅವಕಾಶವನ್ನು ಎಲ್ಲ ಅಭ್ಯರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು. ನನ್ನ ಆರೋಗ್ಯ ಲೆಕ್ಕಿಸದೆ ರಥಯಾತ್ರೆ ನಡೆಸುತ್ತಿದ್ದೇನೆ. ನನ್ನ ಆರೋಗ್ಯಕ್ಕಿಂತ ಜನರ ಹಿತ ಮುಖ್ಯ ಎಂದು ಅವರು ಅಭ್ಯರ್ಥಿಗಳಿಗೆ ತಿಳಿಸಿದರು. ಮಹಿಳಾ ಸ್ವಸಹಾಯ ಸಂಘಗಳ ಸಾಲ ಮನ್ನಾ, ಹಿರಿಯ ನಾಗರಿಕರಿಗೆ 5000 ರು. ಮಾಸಾಶನ, ವಿಕಲಚೇತನರು ಹಾಗೂ ವಿಧವೆಯರಿಗೆ 2500 ರು. ಮಾಶಾಸನ ನೀಡುವ ಬಗ್ಗೆ ಜನರಿಗೆ ತಿಲಿಸಲು ಸೂಚನೆ ನೀಡಿದರು.
2006 ಹಾಗೂ 2018ರಲ್ಲಿ ನಾವು ಸಾಲ ಮನ್ನಾ ಬಗ್ಗೆ ಜನರಿಗೆ ತಿಳಿಸಿ, ಸಾಲ ಮನ್ನಾ ಆಗದಿರುವ ಎರಡು ಲಕ್ಷ ಕುಟುಂಬಗಳಿಗೆ ಬಿಜೆಪಿ ಸರಕಾರ ಮಾಡಿದ ಅನ್ಯಾಯದ ಬಗ್ಗೆ ಜನತೆಗೆ ಮಾಹಿತಿ ನೀಡಿ. ಪಂಚರತ್ನ ಯೋಜನೆಗಳ ಬಗ್ಗೆ ಮನೆ ಮನೆಗೂ ಮಾಹಿತಿ ನೀಡಿ, ಮನೆ ಮನೆಗೂ ಪಂಚರತ್ನ ಕಾರ್ಯಕ್ರಮವನ್ನು ಯಶಸ್ಸು ಮಾಡಬೇಕು. ಜನರಿಗೆ ವಿಶ್ವಾಸ ಬರುವಂತೆ ವರ್ತಿಸಿ, ಆ ರೀತಿಯಲ್ಲಿ ಮಾಹಿತಿ ನೀಡಿ ಎಂದು ಅಭ್ಯರ್ಥಿಗಳಿಗೆ ಹೆಚ್.ಡಿ.ಕುಮಾರಸ್ವಾಮಿ ಕಿವಿಮಾತು ಹೇಳಿದರು.
ಕೆಲ ಅಭ್ಯರ್ಥಿಗಳ ಬಗ್ಗೆ ಅತೃಪ್ತಿ: ಸುಮ್ಮನೆ ಮನೆಯಲ್ಲಿ ಕೂತು ಗೆಲ್ಲಬೇಕು ಎಂದರೆ ಗೆಲ್ಲಲು ಸಾಧ್ಯ ಇಲ್ಲ. ಕೆಲ ಕ್ಷೇತ್ರಗಳಲ್ಲಿ ನಾವು ಹಾಕಿರುವ ಅಭ್ಯರ್ಥಿಗಳು ಹಾಗೂ ಆಯಾ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆಗೆ ಸಿಕ್ಕಿರುವ ಸ್ಪಂದನೆ ಬಿಜೆಪಿ ಕಾಂಗ್ರೆಸ್ ಪ್ರಮುಖ ದಿಗ್ಗಜ ನಾಯಕರ ನಿದ್ದೆಗೆಡುವಂತೆ ಮಾಡಿದೆ. ಕೆಲಸ ಮಾಡದ, ವೇಗವಾಗಿ ಮುನ್ನಡೆಯದ ಅಭ್ಯರ್ಥಿಗಳನ್ನು ಮುಲಾಜಿಲ್ಲದೇ ಬದಲಾಯಿಸುತ್ತೇನೆ. ಆರೇಳು ಕ್ಷೇತ್ರಗಳಲ್ಲಿ ಘೋಷಿತ ಅಭ್ಯರ್ಥಿಗಳ ವೇಗ ನನಗೆ ತೃಪ್ತಿ ನೀಡಿಲ್ಲ. ಅವರನ್ನು ಬದಲಾವಣೆ ಮಾಡಲಾಗುವುದು ಎಂದು ಹೇಳಿದರು.
ಪ್ರತಿ ಕ್ಷೇತ್ರವೂ ನನಗೆ ಮುಖ್ಯ, ನಾನು ಕಠಿಣ ನಿರ್ಧಾರ ಕೈಗೊಳ್ಳುವ ಬಗ್ಗೆ ಹಿಂದೆ ಸರಿಯುವುದಿಲ್ಲ. ಮುಲಾಜಿಲ್ಲದೇ ಕಠಿಣ ನಿರ್ಧಾರ ಕೈಗೊಳ್ಳುವ ಅವಕಾಶ ನನ್ನ ಮುಂದೆ ಮುಕ್ತವಾಗಿದೆ. ಕೆಲವರು ಬಹಳ ಉತ್ತವಾಗಿ ಕೆಲಸ ಮಾಡುತ್ತಿದ್ದಾರೆ, ನನಗೆ ಖುಷಿ ಇದೆ, ಕೆಲವರು ಉಪಯೋಗ ಇಲ್ಲ ಎಂದರು.
ಜಿಲ್ಲಾಧ್ಯಕ್ಷರಿಗೆ ಚುರುಕು: ಕೆಲ ಜಿಲ್ಲೆಗಳಲ್ಲಿ ಎಂಟತ್ತು ವರ್ಷಗಳಿಂದ ಅಧ್ಯಕ್ಷರಾದವರು ಇದ್ದಾರೆ, ಆದರೆ, ಒಬ್ಬ ಸೂಕ್ತ ಅಭ್ಯರ್ಥಿಯನ್ನು ಹುಡುಕಲು ಸಾಧ್ಯವಾಗದಿದ್ದರೆ ಹೇಗೆ? ಇನ್ನು ಯಾವ ಸಿಮೆಯ ಅಧ್ಯಕ್ಷಗಿರಿ ನಿಮ್ಮದು? ಇದನ್ನು ಸಹಿಸುವ ಪ್ರಶ್ನೆ ಇಲ್ಲ. ಈಗಾಗಲೇ ಆಯ್ಕೆಯಾಗಿರುವ ಅಭ್ಯರ್ಥಿಗಳ ಗೆಲುವಿಗೆ ಜಿಲ್ಲಾಧ್ಯಕ್ಷರು, ಜಿಲ್ಲೆಗಳ ಎಲ್ಲಾ ಮುಖಂಡರು ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಪಕ್ಷದ ನಿರ್ಣಯವನ್ನು ಎಲ್ಲರೂ ಗೌರವಿಸಬೇಕು, ಅಶಿಸ್ತನ್ನು ಸಹಿಸಲ್ಲ ಎಂದು ನೇರವಾಗಿ ಹೇಳಿದರು.
ಮತಗಟ್ಟೆ ಮಟ್ಟದಲ್ಲಿ ಕೆಲಸ ಮಾಡಬೇಕು, ಮನೆ ಮನೆಗೂ ಹೋಗಿ ಜನರಿಗೆ ನಮ್ಮ ಕಾರ್ಯಕ್ರಮಗಳ ಬಗ್ಗೆ ತಿಳಿಸಬೇಕು ಗೆಲ್ಲಲು ಇರುವ ಪ್ರತಿ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದ ಅವರು, ಪ್ರಚಾರ ಹೇಗೆ ಮಾಡಬೇಕು ಎಂಬ ಬಗ್ಗೆ ಅಭ್ಯರ್ಥಿಗಳಿಗೆ ಟಿಪ್ಸ್ ನೀಡಿದರು. ಅಲ್ಲದೇ, ರಾಜ್ಯದಲ್ಲಿ ಪಕ್ಷದ ನಾಯಕರು ಮಾಡಬೇಕಾದ ಪ್ರವಾಸದ ಬಗ್ಗೆ ಚರ್ಚೆ ನಡೆಯಿತು. ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಕೆಲ ಮಹತ್ವದ ವಿಚಾರಗಳನ್ನು ಪ್ರಸ್ತಾಪ ಮಾಡಿದರು.
ಈ ವೇಳೆ ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪೂರ್, ಎನ್ ಎಂ ನಂಬಿ, ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯ ಕೆ ಎನ್ ತಿಪ್ಪೇಸ್ವಾಮಿ, ರಾಮನಗರ ಕ್ಷೇತ್ರದ ಅಭ್ಯರ್ಥಿ ಹಾಗೂ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಎಲ್ಲ ಶಾಸಕರು, ಘೋಷಿತ ಅಭ್ಯರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ನಮ್ಮ ಕುಟುಂಬದ ಬಗ್ಗೆ ಚರ್ಚೆ ಮಾಡುವ ನೈತಿಕತೆ ನಿಮಗೆ ಇಲ್ಲ: ಪಂಚರತ್ನ ರಥಯಾತ್ರೆಯ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆಗೆ ಪ್ರತಿಕ್ರಯಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ನೀವು, ನಮ್ಮ ನಾಯಕರ ಸಿಡಿ ಸಂಕಲ್ಪ ಅಂತ ನಿಮ್ಮ ವಿಜಯಸಂಕಲ್ಪಕ್ಕೆ ಹೆಸರಿಟ್ಟರೆ, ನಾನು ನವಗ್ರಹ ಯಾತ್ರೆ ಅಂತ ಹೆಸರು ಇಡುತ್ತೇನೆ. ಒಬ್ಬ ಕೇಂದ್ರ ಸಚಿವರಾಗಿ ಇಂತಹ ಹೇಳಿಕೆ ಸರಿಯಲ್ಲ. ನಮ್ಮ ಕುಟುಂಬದ ಬಗ್ಗೆ ಚರ್ಚೆ ಮಾಡುವ ನೈತಿಕತೆ ನಿಮಗೆ ಇಲ್ಲ. ನಿಮ್ಮಿಂದ ಹೇಳಿಸಿಕೊಂಡು ನಾವು ಬದುಕಬೇಕಿಲ್ಲ ಎಂದು ಟಾಂಗ್ ನೀಡಿದರು.
ನಮ್ಮ ಕುಟುಂಬದಲ್ಲಿ ತೊಂದರೆಯಿಲ್ಲ: ಚುನಾವಣೆ ಬಂದಾಗ ಪ್ರತಿಯೊಬ್ಬರು ಆಸೆ ಇರುತ್ತದೆ. ಆದರೆ, ಕುಟುಂಬದಲ್ಲಿ ಯಾವುದೇ ತೊಂದರೆಯಿಲ್ಲ. ಹಾಸನಕ್ಕೆ ಸರಿಯಾದ ಅಭ್ಯರ್ಥಿ ಆಯ್ಕೆ ಮಾಡಲಿದ್ದೇವೆ. ನಿಮ್ಮ ಸಹೋದರ ಯಾವುದೋ ಬ್ಯಾಂಕ್ ವಂಚನೆ ಮಾಡಿದ್ರಲ್ಲ ಅದನ್ನು ಸರಿಯಾಗಿ ಇಟ್ಟುಕೊಳ್ಳಿ ಎಂದು ಟೀಕಿಸಿದರು. ರಾಜ್ಯದಲ್ಲಿ ಇದುವರೆಗೆ ಒಟ್ಟು 61 ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ಮಾಡಿದ್ದೇವೆ. ಜೆಡಿಎಸ್ ಅಸ್ತಿತ್ವ ಮೂರ್ನಾಲ್ಕು ಜಿಲ್ಲೆಗಳಿಗೆ ಸೀಮಿತ ಎಂಬ ಪ್ರತಿಪಕ್ಷಗಳ ಲಘುವಾದ ಮಾತುಗಳಿಗೆ ಉತ್ತರ ಕರ್ನಾಟಕದ ರಥಯಾತ್ರೆ ಉತ್ತರ ಕೊಟ್ಟಿದೆ. ಅಭ್ಯರ್ಥಿಗಳ ಘೋಷಣೆ ಮಾಡಿ ಎಂದು ಜನರು ಘೋಷಣೆ ಹಾಕುತ್ತಿರುವುದು ಕಂಡು ಬಂದಿದೆ. ನಾವು 123ಗುರಿಯನ್ನು ತಲುಪುತ್ತೇವೆ ಎಂಬ ವಿಶ್ವಾಸ ಹೆಚ್ಚಾಗಿದೆ ಎಂದು ಹೇಳಿದರು.
ಇದೇ ವೇಳೆ ಸಿಂಧಗಿ ಹಾಗೂ ಚಿತ್ತಾಪುರ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದ ಕುಮಾರಸ್ವಾಮಿ ಅವರು, ಶಿವಾನಂದ ಪಾಟೀಲ್ ಸಿಂಧಗಿ ಅಧಿಕೃತ ಅಭ್ಯರ್ಥಿ ಘೋಷಣೆ ಮಾಡಿದ್ದೆವು. ಆದರೆ, ಅವರು ಅಕಾಲಿಕ ಮರಣ ಹೊಂದಿದ್ದರಿಂದ ಶಿವಾನಂದ ಪಾಟೀಲ್ ಅವರ ಪತ್ನಿ ವಿಶಾಲಾಕ್ಷಿ ಶಿವಾನಂದ್ ಪಾಟೀಲ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದೇವೆ. ಅದೇ ರೀತಿ ಸಿವಿಲ್ ನ್ಯಾಯಾಧೀಶರಾಗಿದ್ದ ಸುಭಾಷ್ ಚಂದ್ರ ರಾಥೋಡ್ ಅವರು ಪಕ್ಷ ಸೇರಿದ್ದಾರೆ. ಅವರು ಸಿವಿಲ್ ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ. ಅವರ ರಾಜೀನಾಮೆ ಕೂಡ ಅಂಗೀಕಾರವಾಗಿದೆ. ಅಧಿಕೃತವಾಗಿ ಇಂದು ಅವರು ಜೆಡಿಎಸ್ ಸೇರುತ್ತಿದ್ದಾರೆ. ಆ ಭಾಗದಲ್ಲಿ ಪಕ್ಷ ಸಂಘಟನೆ ಮಾಡಲು ಮುಂದಾಗಿದ್ದಾರೆ ಎಂದು ತಿಳಿಸಿದರು.
ಅಭ್ಯರ್ಥಿಗಳಿಗೆ ಟಾಸ್ಕ್: ಇಂದಿನ ಸಭೆಯಲ್ಲಿ ಅಭ್ಯರ್ಥಿಗಳಿಗೆ ಟಾಸ್ಕ್ ಕೊಡುವ ಕೆಲಸ ಮಾಡಿದ್ದೇವೆ. ಮನೆ ಮನೆಗೆ ಪಂಚರತ್ನ ಅನ್ನುವ ಕರಪತ್ರ ಹಂಚುವ ಕೆಲಸ ಮಾಡಬೇಕು. ಪ್ರತಿ ಹಳ್ಳಿಯಲ್ಲಿ 100 ಅಭಿಮಾನಿಗಳನ್ನು ಗುರುತಿಸಿ ಅವರ ಮನೆ ಮುಂದೆ ಪಕ್ಷದ ಚಿಹ್ನೆ ಹಾಕಬೇಕೆಂದು ಹೇಳಿದ್ದೇವೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಅಭ್ಯರ್ಥಿಗಳು ಗ್ರಾಮ ವಾಸ್ತವ್ಯ ಮಾಡಬೇಕು ಎಂದು ತಿಳಿಸಿದ್ದೇವೆ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದಲ್ಲಿ 40-45 ಸ್ಥಾನ ಜೆಡಿಎಸ್‌ಗೆ: ಈ ಭಾರಿ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಕನಿಷ್ಠ 40 ರಿಂದ 45 ಸ್ಥಾನಗಳನ್ನು ಜೆಡಿಎಸ್‌ಗೆ ಕೊಡಲು ಜನ ತೀರ್ಮಾನ ಮಾಡಿದ್ದಾರೆ. ಸರ್ಕಾರ ಕಲ್ಯಾಣ ಕರ್ನಾಟಕ ಅಂತ ಏನೋ ಹೆಸರಿಟ್ಡಿದೆ, ಆದರೆ, ಎಷ್ಟು ಕಲ್ಯಾಣ ಆಗಿದೆ ಅನ್ನುವುದನ್ನು ನೋಡಬೇಕು ಎಂದರು.
ಇದನ್ನೂ ಓದಿ:ಅರಕಲಗೂಡು ಕ್ಷೇತ್ರಕ್ಕೆ ಎ ಮಂಜು ಜೆಡಿಎಸ್ ಅಭ್ಯರ್ಥಿ: ಹೆಚ್ ಡಿ ಕುಮಾರಸ್ವಾಮಿ