ಬೆಂಗಳೂರು : ಆರ್ ಆರ್ ನಗರ ಉಪ ಚುನಾವಣೆಯಲ್ಲಿ ಬಿಜೆಪಿಗಿಂತ ಅತಿವೇಗವಾಗಿ ಹಣ ಹಂಚಲು ಕಾಂಗ್ರೆಸ್ ಮುಂದಾಗಿದೆ. ಪಾಪದ ಹಣ ಹಂಚಿಕೆ ಮಾಡಿ ಚುನಾವಣಾ ನಡೆಸುವುದಕ್ಕೆ ಈ ಪಕ್ಷದವರು ಮುಂದಾಗಿದ್ದಾರೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ನಿನ್ನೆ ರಾತ್ರಿ ಚುನಾವಣಾ ಪ್ರಚಾರದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಜನರು ಸರಿಯಾದ ಬುದ್ಧಿ ಕಲಿಸುತ್ತಾರೆ. ಕಾಂಗ್ರೆಸ್ನವರು ಬಿಜೆಪಿ ಅಭ್ಯರ್ಥಿ ಮೇಲೆ ಆರೋಪ ಮಾಡುತ್ತಿದ್ದರು. ಬಿಜೆಪಿ ಅಭ್ಯರ್ಥಿಯಿಂದ ಹಣ ಹಂಚುವುದನ್ನು ಕಾಂಗ್ರೆಸ್ನವರು ಕಲಿತರಾ? ಅಥವಾ ಕಾಂಗ್ರೆಸ್ನಿಂದ ಬಿಜೆಪಿ ಅಭ್ಯರ್ಥಿ ಕಲಿತರಾ? ಎಂದು ಪ್ರಶ್ನಿಸಿದರು.
ಕನಕಪುರದ ಅರುಣ್ ಎಂಬಾತ ಹಣ ಹಂಚುತ್ತಿದ್ದು, ಈ ವೇಳೆ ಆತನನ್ನು ಪೊಲೀಸರು ಬಂಧಿಸಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದರು. ಚುನಾವಣೆ ಅಕ್ರಮಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಮಾಹಿತಿ ಬರುತ್ತಿದೆ. ಕನಕಪುರದಲ್ಲಿ 2000 ಇಸವಿಯಲ್ಲಿ ನಡೆದಿದ್ದ ಉಪ ಚುನಾವಣೆ ಇದೀಗ ನೆನಪಾಗುತ್ತಿದೆ. ಅಂದು ಕಳ್ಳ ಮತದಾನ ಮಾಡಿಲಾಗಿತ್ತು. ಇಂದು ಅದೇ ರೀತಿ ಆರ್ಆರ್ ನಗರದಲ್ಲಿ ಮಾಡಲು ಹೊರಟಿದ್ದಾರೆ. ಚುನಾವಣೆಗೆ ಹಣ ಹಂಚಲು ಮಾಗಡಿ ಹಾಗೂ ಕನಕಪುರ ಭಾಗದಿಂದ ಜನರನ್ನು ಕರೆದುಕೊಂಡು ಬಂದಿದ್ದಾರೆ. ಆದರೆ ಇದು ಇಲ್ಲಿ ನಡೆಯುವುದಿಲ್ಲ. ಈ ಭಾಗದ ಜನರು ಬಹಳ ಬುದ್ದಿವಂತರಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ತಿಳಿಸಿದರು.