ಬೆಂಗಳೂರು:ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರಿಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಇಂದು ದೂರವಾಣಿ ಕರೆ ಮಾಡಿ, ರಾಜ್ಯದ ಕೊರೊನಾ ಸೋಂಕಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದು ಕೊಂಡಿದ್ದಾರೆ.
ರಾಜ್ಯದಲ್ಲಿ ಅತಿವೇಗವಾಗಿ ಹರಡುತ್ತಿರುವ ಕೊರೊನಾ ವಿಚಾರವಾಗಿ ಮಾತನಾಡಿದ ಗೌಡರು, ಸಂಪೂರ್ಣ ಮಾಹಿತಿ ಪಡೆದು ಕೆಲವು ಸಲಹೆಗಳನ್ನೂ ನೀಡಿದ್ದಾರೆ. ಎಲ್ಲ ಜಿಲ್ಲೆಗಳಿಗೂ ಪರಿಹಾರವನ್ನು ಶೀಘ್ರವಾಗಿ ಒದಗಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಹಾಸನ ಜಿಲ್ಲೆಯಲ್ಲೂ ಸಾವು ನೋವು ಹೆಚ್ಚಾಗುತ್ತಿರುವುದರ ಬಗ್ಗೆಯು ಮಾತನಾಡಿ ಕಳವಳ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮುನ್ನ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೂ ದೂರವಾಣಿ ಮುಖಾಂತರ ಮಾತನಾಡಿದ ದೇವೇಗೌಡರು, ಹಾಸನ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ತೀವ್ರ ಉಲ್ಬಣಗೊಳ್ಳುತ್ತಿರುವ ಬಗ್ಗೆ ಸಂಪೂರ್ಣ ಮಾಹಿತಿ ಕೇಳಿ ಮತ್ತು ಕೂಡಲೇ ಎಚ್ಚರ ವಹಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಉಪ ಮುಖ್ಯ ಮಂತ್ರಿ ಅಶ್ವತ್ಥ್ ನಾರಾಯಣ ಅವರ ಜೊತೆಗೂ ದೂರವಾಣಿ ಮುಖಾಂತರ ಮಾತನಾಡಿ, ಜಿಲ್ಲೆಗೆ ಬೇಕಾಗಿರುವ ಆಮ್ಲಜನಕವನ್ನು ಒದಗಿಸುವಂತೆ ಮನವಿ ಮಾಡಿದರು. ಕಳೆದ ವಾರ ಮುಖ್ಯ ಮಂತ್ರಿಗಳ ಜೊತೆಗೂ ಕೂಡ ದೂರವಾಣಿ ಮುಖಾಂತರ ಮಾತನಾಡಿ, ರಾಜ್ಯದಲ್ಲಿ ಉಲ್ಬಣಗೊಂಡಿರುವ ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೆಲವು ಸಲಹೆಗಳನ್ನು ನೀಡಿದ್ದರು.