ಬೆಂಗಳೂರು : ಖಾಸಗಿ ಗಣಿ ಕಂಪನಿಯೊಂದರ ಗುತ್ತಿಗೆ ನವೀಕರಣ ವಿಚಾರವಾಗಿ ನ್ಯಾಯಾಲಯ ನೀಡಿದ್ದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಅವರಿಗೆ ಹೈಕೋರ್ಟ್ ನ್ಯಾಯಾಂಗ ನಿಂದನೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.
ಗುತ್ತಿಗೆ ನವೀಕರಿಸಲು ನಿರಾಕರಿಸಿದ ಕ್ರಮ ಪ್ರಶ್ನಿಸಿ ತುಮಕೂರಿನ ಹೈಡೆಲ್ಬರ್ಗ್ ಸಿಮೆಂಟ್ ಇಂಡಿಯಾ ಸಂಸ್ಥೆ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಪ್ರಕರಣದ ಕುರಿತು ಪ್ರಸ್ತಾಪಿಸಿದ ಪೀಠ, ಸರ್ಕಾರದ ಧೋರಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ್ದ ಆದೇಶಗಳನ್ನೂ ಅಧಿಕಾರಿಗಳು ಪಾಲಿಸಿಲ್ಲ. ನೀಡಿದ್ದ ಭರವಸೆಯನ್ನೂ ಈಡೇರಿಸಿಲ್ಲ. ಅಧಿಕಾರಿಗಳ ಈ ವರ್ತನೆ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿರುವುದನ್ನು ಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟಿತು.
ಓದಿ : ಗಾಜಿಯಾಬಾದ್ ಪ್ರಕರಣ: ಉತ್ತರ ಪ್ರದೇಶ ಪೊಲೀಸರ ವಿರುದ್ಧ ಹೈಕೋರ್ಟ್ ಗರಂ
ಅಲ್ಲದೇ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ಕ್ರಮ ಜರುಗಿಸಬಾರದೇಕೆ ಎಂಬುದಕ್ಕೆ ಕಾರಣ ನೀಡುವಂತೆ ಸೂಚಿಸಿ ಶೋಕಾಸ್ ನೋಟಿಸ್ ಜಾರಿಗೊಳಿಸಿತು.
ಪ್ರಕರಣದ ಹಿನ್ನೆಲೆ : ಗುತ್ತಿಗೆ ನವೀಕರಣ ನಿರಾಕರಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸರ್ಕಾರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿತ್ತು. 2021ರ ಫೆಬ್ರವರಿ 5ರಂದು ನಡೆದಿದ್ದ ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದಿಸಿ, ಅರ್ಜಿದಾರ ಕಂಪನಿಯ ಗುತ್ತಿಗೆಯನ್ನು ಮಾರ್ಚ್ 31ರೊಳಗೆ ನವೀಕರಿಸಿ ಕೊಡುವುದಾಗಿ ತಿಳಿಸಿದ್ದರು. ಆದರೆ, ಗುತ್ತಿಗೆ ನವೀಕರಿಸಿರಲಿಲ್ಲ.
ಏಪ್ರಿಲ್ 20ರಂದು ನಡೆದ ವಿಚಾರಣೆ ವೇಳೆ ಗುತ್ತಿಗೆ ನವೀಕರಿಸದ ಸರ್ಕಾರದ ನಡೆಗೆ ಅಕ್ರೋಶ ವ್ಯಕ್ತಪಡಿಸಿದ್ದ ಪೀಠ, ಭರವಸೆ ಈಡೇರಿಸದ ತಪ್ಪಿತಸ್ಥ ಅಧಿಕಾರಿಗಳ ಪಟ್ಟಿ ಕೊಡಿ. ನ್ಯಾಯಾಲಯವೇ ಅವರ ವಿರುದ್ಧ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈಗೆತ್ತಿಕೊಳ್ಳಲಿದೆ ಎಂದು ನಿರ್ದೇಶಿಸಿತ್ತು.
ಮೇ 25ರಂದು ನಡೆದ ವಿಚಾರಣೆ ವೇಳೆ ಅಧಿಕಾರಿಗಳ ಹೆಸರು ನೀಡದ ಸರ್ಕಾರ, ಗುತ್ತಿಗೆ ನವೀಕರಿಸಲು ಸಮಯಾವಕಾಶ ಕೋರಿತ್ತು. ಆದರೆ, ಜೂನ್ 2ರಂದು ಅರ್ಜಿ ವಿಚಾರಣೆಗೆ ಬಂದಾಗಲೂ ಮತ್ತೆ ಕಾಲಾವಕಾಶ ಕೋರಿದ್ದ ಸರ್ಕಾರ ‘ಒಂದು ತಿಂಗಳಲ್ಲಿ ಪೂರಕ ಗುತ್ತಿಗೆ ಕ್ರಯ ಪತ್ರ ಮಾಡಿಕೊಡುವ ಭರವಸೆ ನೀಡಿತ್ತು. ಆದರೆ, ಈವರೆಗೂ ಗುತ್ತಿಗೆ ನವೀಕರಿಸಿಲ್ಲ. ಭರವಸೆಯಂತೆ ಪೂರಕ ಗುತ್ತಿಗೆ ಕ್ರಯ ಪತ್ರವನ್ನೂ ಮಾಡಿಕೊಟ್ಟಿಲ್ಲ. ಮತ್ತೊಂದಡೆ ತಪ್ಪಿತಸ್ಥ ಅಧಿಕಾರಿಗಳ ಹೆಸರುಗಳನ್ನು ತಿಳಿಸಿಲ್ಲ. ಇವೆಲ್ಲವೂ ನ್ಯಾಯಾಲಯದ ಅಸಮಾಧಾನಕ್ಕೆ ಕಾರಣವಾಗಿದೆ.