ಬೆಂಗಳೂರು: ಮೈಸೂರು ಜಿಲ್ಲೆಯ ಪರಿಯಾಪಟ್ಟಣದಲ್ಲಿ ಈದ್ ಮಿಲಾದ್‌ಗೆ ಅನುಮತಿ ನೀಡುವ ಕುರಿತಂತೆ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳುವಂತೆ ಹೈಕೋರ್ಟ್ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ. ಈದ್ ಮಿಲಾದ್ ಆಚರಣೆಗೆ ಅನುಮತಿ ನಿರಾಕರಣೆ ಪ್ರಶ್ನಿಸಿ ಪಿರಿಯಾಪಟ್ಟಣದ ಮಸ್ಜಿದ್ ಎ ಜನ್ನತ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ರೆಹ್ಮತ್ ಉಲ್ಲಾ ಕೊತ್ವಾಲ್ ವಾದ ಮಂಡಿಸಿ, ಅರ್ಜಿದಾರರ ವಿರುದ್ಧ ಅಪರಾಧ ದಂಡ ಸಂಹಿತೆ ಸೆಕ್ಷನ್ 107ರನ್ವಯ ಶಾಂತಿ ಮತ್ತು ಸೌಹಾರ್ದತೆ ಕದಡುವ ಕುರಿತು ಪ್ರಕರಣ ಇತ್ತು ಎಂಬ ಕಾರಣಕ್ಕೆ ಈದ್ ಮಿಲಾದ್ ಆಚರಣೆಗೆ ಅನುಮತಿ ನೀಡಲು ಜಿಲ್ಲಾಧಿಕಾರಿ ನಿರಾಕರಿಸಿದ್ದಾರೆ. ಆದರೆ, ಆ ಕೇಸ್ ರದ್ದಾಗಿದೆ. ಹಾಗಾಗಿ ಅನುಮತಿ ನೀಡುವ ವಿಚಾರದಲ್ಲಿ ಮರುಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಬೇಕೆಂದು ಕೋರಿದರು.
ಸರ್ಕಾರದ ಪರ ವಕೀಲ ವಿನೋದ್ ಕುಮಾರ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪಿರಿಯಾ ಪಟ್ಟಣದ ಎರಡು ಗುಂಪುಗಳ ನಡುವೆ ವೈಮನಸ್ಯ ಇರುವುದು ನಿಜ, ಆದೇ ಕಾರಣಕ್ಕೆ ಅನುಮತಿ ನಿರಾಕರಣೆ ಮಾಡಲಾಗಿತ್ತು ಎಂದು ಹೇಳಿದರು.
ವಾದ -ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಸಿಆರ್‌ಪಿಸಿ ಸೆಕ್ಷನ್ 107ರಡಿ ದಾಖಲಾಗಿದ್ದ ಪ್ರಕರಣ ರದ್ದಾಗಿರುವ ಹಿನ್ನೆಲೆಯಲ್ಲಿ ಈದ್ ಮಿಲಾದ್ ಆಚರಣೆಗೆ ಅನುಮತಿ ನೀಡುವ ಬಗ್ಗೆ ಸದ್ಯದ ಸ್ಥಿತಿಗತಿ ಪರಿಶೀಲಿಸಿ ಹೊಸದಾಗಿ ಅ.17 ರೊಳಗೆ ನಿರ್ಧಾರ ಕೈಗೊಂಡು ಅದನ್ನು ನ್ಯಾಯಾಲಯಕ್ಕೆ ತಿಳಿಸುವಂತೆ ಡಿಸಿಗೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.
ಇದನ್ನೂ ಓದಿ: ಲೋಕಾಯುಕ್ತ ದಾಳಿ ವೇಳೆ ಸಿಕ್ಕಿಬಿದ್ದ ಅಧಿಕಾರಿಗೆ 1 ಕೋಟಿ ದಂಡ ವಿಧಿಸಿದ ಕೋರ್ಟ್