ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘಿಸಿ ರಾಯಧನ ರೂಪದಲ್ಲಿ ವಿದೇಶಿ ಕಂಪನಿಗಳಿಗೆ ಹಣ ವರ್ಗಾವಣೆ ಮಾಡಿದ್ದ ಆರೋಪದಲ್ಲಿ ಶಿಯೋಮಿ ಇಂಡಿಯಾದಿಂದ 5,551.27 ಕೋಟಿ ರೂ. ಗಳನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದ್ದ ಕ್ರಮವನ್ನು ಹೈಕೊರ್ಟ್ ಎತ್ತಿ ಹಿಡಿದಿದೆ.
ಶಿಯೋಮಿ ಬ್ಯಾಂಕ್ ಖಾತೆಗಳಿಂದ ಜಾರಿ ನಿರ್ದೇಶನಾಲಯ 5,551.27 ಕೋಟಿ ರೂ. ವಶಪಡಿಸಿಕೊಂಡಿತ್ತು. ಇದನ್ನು ಜಾರಿ ನಿರ್ದೇಶನಾಲಯದ ಅಧೀನದ ಸಕ್ಷಮ ಪ್ರಾಧಿಕಾರ ಎತ್ತಿ ಹಿಡಿದಿತ್ತು. ಈ ಕ್ರಮ ಪ್ರಶ್ನಿಸಿ ಶಿಯೋಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಇಡಿ ಕ್ರಮವನ್ನು ಎತ್ತಿ ಹಿಡಿದಿದೆ. ಅಲ್ಲದೇ, ದೇಶೀಯ ಕಂಪನಿಗಳು ವಿದೇಶಗಳಿಗೆ ಹಣ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಫೆಮಾ ಕಾಯಿದೆ ಸೆಕ್ಷನ್ 37ಎ ಯ ಪ್ರಕಾರ ಹಣ ವಶಪಡಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಯಾವುದೇ ನಿರ್ಬಂಧ ಇಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಜತೆಗೆ, ಸಕ್ಷಮ ಪ್ರಾಧಿಕಾರದ ಆದೇಶವನ್ನು ಶಿಯೋಮಿ ಮೇಲ್ಮನವಿ ಪ್ರಾಧಿಕಾರದಲ್ಲಿ ಮತ್ತೊಮ್ಮೆ ಪ್ರಶ್ನಿಸಲು ಅವಕಾಶ ಕಲ್ಪಿಸಿದೆ.
ಪ್ರಕರಣದ ಹಿನ್ನೆಲೆ ಏನು?: ಫೆಮಾ ನಿಯಮಗಳನ್ನು ಉಲ್ಲಂಘಿಸಿ ಶಿಯೋಮಿ ರಾಯಧನ ಪಾವತಿಸುವ ಸೋಗಿನಲ್ಲಿ ಅಮೆರಿಕದ ಎರಡು ಖಾತೆ ಮತ್ತು ಚೀನಾದಲ್ಲಿ ಒಂದು ಖಾತೆಗೆ ಹಣ ವರ್ಗಾವಣೆ ಮಾಡಿತ್ತು. ಈ ಸಂಬಂಧ ಇಡಿ ಶಿಯೋಮಿಯ ಬ್ಯಾಂಕ್ ಖಾತೆಗಳಲ್ಲಿನ 5,551.27 ಕೋಟಿ ರೂ. ಗಳನ್ನು ಸೀಜ್ ಮಾಡಿ 2022ರ ಏಪ್ರಿಲ್ 29 ರಂದು ಆದೇಶಿಸಿತ್ತು. ಇಡಿ ಕ್ರಮವನ್ನು ಪ್ರಶ್ನಿಸಿ ಶಿಯೋಮಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾಯಪೀಠ, ಫೆಮಾ ಅಡಿ ಸ್ಥಾಪನೆಯಾಗಿರುವ ಸಕ್ಷಮ ಪ್ರಾಧಿಕಾರದಲ್ಲಿ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಆದರೆ, ಸಕ್ಷಮ ಪ್ರಾಧಿಕಾರ ಜಾರಿ ನಿರ್ದೇನಾಲಯದ ಕ್ರಮವನ್ನು 2022ರ ಸೆಪ್ಟಂಬರ್ 29 ರಂದು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಶಿಯೋಮಿ ಮತ್ತೆ ಹೈಕೋರ್ಟ್ ಮೆಟ್ಟಿಲೇರಿತ್ತು.
ಶಿಯೋಮಿ ವಾದ: ಫೆಮಾ ಕಾಯ್ದೆ ಸೆಕ್ಷನ್ 31ಎ ಪ್ರಕಾರ ಭಾರತದ ಹೊರಗೆ ಹೊಂದಿರುವ ಆಸ್ತಿಗಳ ಬಗ್ಗೆ ಮಾಹಿತಿ ಸ್ವೀಕರಿಸಿದ ಬಳಿಕ ಕೇಂದ್ರ ಸರ್ಕಾರ ಸೂಚಿಸಿದ ಅಧಿಕೃತ ಅಧಿಕಾರಿ ದೇಶದ ಹೊರಗೆ ಇರುವ ಆಸ್ತಿಗಳನ್ನು ವಶಪಡಿಸಿಕೊಳ್ಳವ ಅಧಿಕಾರವು ಸಂವಿಧಾನ ಪರಿಚ್ಚೇಧ 300ಎ (ಕಾನೂನಿನ ಅಧಿಕಾರವಿಲ್ಲದೇ ವ್ಯಕ್ತಿಗಳ ಸ್ವತ್ತು ಕಸಿದುಕೊಳ್ಳುವುದು) 301 (ವ್ಯಾಪಾರ ಮತ್ತು ಪರಸ್ಪರ ವ್ಯವಹಾರ ಸ್ವಾತಂತ್ರ್ಯ) ಮತ್ತು ಪರಿಚ್ಚೇಧ 14 (ಸಮಾನತೆ) 20 (ಅಪರಾಧಗಳ ಕುರಿತು ಅಪರಾಧಿಯೆಂದು ನಿರ್ಣಯಿಸುವ ಸಂದರ್ಭದಲ್ಲಿ ರಕ್ಷಣೆ) ಗಳ ವಿರುದ್ಧವಾಗಿದೆ. ಹೀಗಾಗಿ ಫೆಮಾ ಕಾಯ್ದೆಯ ಸೆಕ್ಷನ್ 37ಎ ಅನ್ನು ಅಸಾಂವಿಧಾನಿಕ ಎಂದು ಘೋಷಣೆ ಮಾಡಬೇಕು ಎಂದು ಕೋರಿತ್ತು.
ಇದನ್ನೂ ಓದಿ: 5,551 ಕೋಟಿ ರೂ. ಜಪ್ತಿ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ: ಶಿಯೋಮಿಗೆ ಮರು ಅರ್ಜಿಯಲ್ಲೂ ಸಿಗದ ರಿಲೀಫ್