ಬೆಂಗಳೂರು: ಸುಮಾರು ಐದು ದಶಕಗಳ ಕಾಲ ಗಾಢ ನಿದ್ರೆಯಲ್ಲಿದ್ದು, ಈಗ ದೈವವಾಣಿ ಆವತೀರ್ಣವಾಯಿತೆಂಬಂತೆ ಏಕಾಏಕಿ ನಿದ್ದೆಯಿಂದ ಎದ್ದು ನ್ಯಾಯ ಕೇಳಲು ಬಂದವರಿಗೆ ನೆರವು ನೀಡಲು ನಾವು ಇಲ್ಲಿ ಕೂತಿಲ್ಲ. ಅಂತಹದ್ದನ್ನು ನಮ್ಮಿಂದ ನಿರೀಕ್ಷಿಸುವುದೂ ಬೇಡ ಎಂದು ಪುನರ್ವಸತಿ ಕಲ್ಪಿಸುವ ವಿಚಾರವಾಗಿ 50 ವರ್ಷಗಳ ಬಳಿಕ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ವೇಳೆ ಹೈಕೋರ್ಟ್ ಚಾಟಿ ಬೀಸಿದೆ.
ಭದ್ರಾ ಮೇಲ್ದಂಡೆ ಯೋಜನೆಗಾಗಿ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಸಂತೆಬೆನ್ನೂರು ಹೋಬಳಿಯ ಗೊಲ್ಲರಹಳ್ಳಿ ಗ್ರಾಮದ ಸ್ಥಳಾಂತರಕ್ಕೆ 1962ರಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿದ್ದ 20 ಎಕರೆ ಜಮೀನನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಅರ್ಹ ಸಂತ್ರಸ್ತ ಫಲಾನುಭವಿಗಳಿಗೆ ಅನ್ಯಾಯವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಸ್ಥಳೀಯರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಗೊಲ್ಲರಹಳ್ಳಿ ಸ್ಥಳಾಂತರಕ್ಕೆ 1962ರಲ್ಲಿ 20 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ, ಕೆಲವರು ಆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಸಂತ್ರಸ್ತ ಫಲಾನುಭವಿಗಳು ಪುನರ್ವಸತಿ ಪರಿಹಾರದಿಂದ ವಂಚಿತರಾಗಿದ್ದಾರೆ. ಈ ವಿಚಾರವಾಗಿ ಗ್ರಾಮಸ್ಥರು ಅನೇಕ ಮನವಿಗಳನ್ನು ಕೊಟ್ಟಿದ್ದಾರೆ. ಇಲಾಖೆಗಳ ನಡುವೆ ಪತ್ರ ವ್ಯವಹಾರಗಳಷ್ಟೇ ನಡೆದಿವೆ. ನ್ಯಾಯ ಸಿಕ್ಕಿಲ್ಲ. ಹಾಗಾಗಿ, ಈ ಬಗ್ಗೆ 1994ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅದನ್ನು ನ್ಯಾಯಾಲಯ ವಜಾಗೊಳಿಸಿತ್ತು. ಇದಾದ ಬಳಿಕ 2020ರಲ್ಲಿ ಮತ್ತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಇದಕ್ಕೆ ಅಸಮಧಾನಗೊಂಡ ನ್ಯಾಯಪೀಠ, 19ನೇ ಶತಮಾನ ಕಳೆದು 20ನೇ ಶತಮಾನದ 20 ವರ್ಷಗಳು ಕಳೆದು ಹೋಗಿವೆ. 1962ರಲ್ಲಿ ಜಮೀನು ಸ್ವಾಧೀನಪಡಿಸಿಕೊಂಡಿದ್ದರೂ, 50 ವರ್ಷ ಗಾಢ ನಿದ್ದೆಯಲ್ಲಿದ್ದ ಅರ್ಜಿದಾರ ಫಲಾನುಭವಿಗಳು, ಪ್ರಸ್ತುತ ಕೋರ್ಟ್‌ಗೆ ಹೋಗಲು ಸೂಕ್ತ ಸಮಯ ಎಂದು ದೈವವಾಣಿ ಕೇಳಿಸಿಕೊಂಡು ಏಕಾಏಕಿ ನಿದ್ದೆಯಿಂದ ಎದ್ದವರಂತೆ ಈಗ 2023ರಲ್ಲಿ ಕೋರ್ಟ್‌ಗೆ ಬಂದಿದ್ದಾರೆ.
ಇಂತಹ ಗಾಢ ನಿದ್ದೆಯಲ್ಲಿದ್ದವರಿಗೆ ಹೈಕೋರ್ಟ್ ನೆರವು ನೀಡುತ್ತದೆ ಎಂದು ನಿರೀಕ್ಷೆ ಮಾಡುತ್ತೀರಾ? ಹಾಗೇ ಆಗುವುದಿಲ್ಲ. ನಿದ್ರಾವಸ್ಥೆಯಲ್ಲಿದ್ದವರಿಗೆ ಸಹಾಯ ಮಾಡಲು ಈ ಕೋರ್ಟ್ ಇಲ್ಲ. ನಾವು ಏನಿದ್ದರೂ ಜಾಗೃತ ಸ್ಥಿತಿಯಲ್ಲಿದ್ದವರಿಗೆ ನೆರವು ನೀಡಬಹುದು. ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ವಿಳಂಬವನ್ನು ಮನ್ನಿಸಬಹುದು. ಆದರೆ, ದಶಕಗಳ ವಿಳಂಬವನ್ನು ಒಪ್ಪಲು ಸಾಧ್ಯವಿಲ್ಲ. ಇದೊಂದೇ ಪ್ರಕರಣ ಅಲ್ಲ, ಇಂತಹ ಅನೇಕ ಅರ್ಜಿಗಳು ಬರುತ್ತಿದ್ದು, ಅದರಿಂದ ಸಾಕಾಗಿ ಹೋಗಿದೆ. ನಾವು ತುಂಬಾ ಸಹನೆ ತೋರಿಸುತ್ತಿದ್ದೇವೆ. ಈಗ ದೊಡ್ಡ ಮೊತ್ತದ ದಂಡ ವಿಧಿಸಲು ಆರಂಭಿಸಬೇಕೆನಿಸುತ್ತದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ನಮ್ಮ ವಿರೋಧವಿಲ್ಲ. ಆದರೆ, ಇಂತಹ ಅರ್ಜಿಗಳಿಗೆ ನಮ್ಮದು ತೀವ್ರ ಆಕ್ಷೇಪವಿದೆ ಎಂದು ಹೇಳಿತು.
ಕೊನೆಗೆ ಅರ್ಜಿ ವಾಪಸ್ ಪಡೆಯವುದಾಗಿ ಅರ್ಜಿದಾರರ ಪರ ವಕೀಲರು ಹೇಳಿರುವುದನ್ನು ಒಪ್ಪಿದ ನ್ಯಾಯಪೀಠ, ಅರ್ಜಿದಾರರ ಫಲಾನುಭವಿಗಳು ವೈಯುಕ್ತಿಕವಾಗಿ ಕೋರ್ಟ್‌ನಲ್ಲಿ ನ್ಯಾಯ ಪಡೆದುಕೊಳ್ಳಬಹುದು ಎಂದು ತಿಳಿಸಿದ ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿತು.
ಇದನ್ನೂ ಓದಿ: ಎಚ್ಎಸ್ಆರ್ಪಿ ನಂಬರ್ ಫಲಕ ಕುರಿತು ಮುಂದಿನ ವಾರ ನಿರ್ಧಾರ : ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ