ಬೆಂಗಳೂರು: ಕೋಟಾ ಶ್ರೀನಿವಾಸ್ ಪೂಜಾರಿಯವರಿಗೆ ಸಚಿವ ಸ್ಥಾನ ಕೊಡಬೇಕಾಗಿರುವ ಅನಿವಾರ್ಯತೆ ಇತ್ತು. ಮೂಲತಃ ನಾನು ಶಿವಮೊಗ್ಗ ಜಿಲ್ಲೆಯವನಾಗಿದ್ದಕ್ಕೆ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ. ಮುಂದೆ ಸಿಗುವ ಭರವಸೆ ಇದೆ ಎಂದು ಹಾಲಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಮತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ದೊಡ್ಡ ದೊಡ್ಡ ನಾಯಕರುಗಳಿದ್ದಾರೆ. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಹಿರಿಯ ನಾಯಕ ಈಶ್ವರಪ್ಪ ಇದ್ದಾರೆ. ಹೀಗಾಗಿ ನಮಗೆ ಸಚಿವ ಸ್ಥಾನ ಸಿಗುವುದು ಅನುಮಾನ ಇತ್ತು ಎಂದು ವಿವರಿಸಿದರು.
ಶಿವಮೊಗ್ಗ ಜಿಲ್ಲೆಯವನಾಗಿರುವ ಕಾರಣಕ್ಕೆ ಸಚಿವ ಸ್ಥಾನ ಕೈತಪ್ಪಿ ಹೋಯ್ತು. ಹಾಗಂತ ನನಗೇನೂ ಅಸಮಾಧಾನವಿಲ್ಲ. ಶಿವಮೊಗ್ಗ ಜಿಲ್ಲೆಯ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಈಶ್ವರಪ್ಪ ಕೂಡಾ ಸಚಿವರಾಗಿದ್ದಾರೆ. ಹಾಗಾಗಿ ನಮಗೆ ಸಚಿವ ಸ್ಥಾನ ತಪ್ಪಿರಬಹುದು. ಆದರೆ ಅರಗ ಜ್ಞಾನೇಂದ್ರ ಅವರಿಗಾದರೂ ಸಚಿವ ಸ್ಥಾನ ಕೊಡಬಹುದಿತ್ತು ಎಂದು ಅಭಿಪ್ರಾಯಪಟ್ಟರು.