ಬೆಂಗಳೂರು: ಹೆಣ್ಣು ಮಕ್ಕಳ ಪಾಲಿಗೆ ತಂದೆಯೇ ಮೊದಲ ಹೀರೊ ಆಗಿರುತ್ತಾರೆ ಎಂಬ ಮಾತಿದೆ. ಇದು ಸತ್ಯ ಕೂಡಾ. ಆದರೆ, ಇದಕ್ಕೆ ಅಪವಾದವೆಂಬಂತೆ ಮಗಳ ಪಾಲಿಗೆ ಇಲ್ಲೊಬ್ಬ ಅಪ್ಪನೇ ವಿಲನ್ ಆಗಿ ಗೋಚರಿಸಿದ್ದಾನೆ..!
ತಂದೆಯಿಂದಲೇ ಮಗಳಿಗೆ ನಿರಂತರ ಶೋಷಣೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆತನ ವಿರುದ್ಧ ಪುತ್ರಿಯ ಪರವಾಗಿ ಪತ್ನಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಉತ್ತರ ಭಾರತ ಮೂಲದ ಮೂಲದ ದಂಪತಿಯು ಕೆಲಸದ ಸಲುವಾಗಿ ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದು ಈ ದಂಪತಿಗೆ ಮುದ್ದಾದ ಹೆಣ್ಣು ಮಗಳಿದ್ದಾಳೆ. ದಂಪತಿ ನಡುವೆ ಅನೋನ್ಯತೆ ಸರಿಯಿಲ್ಲದ ಕಾರಣ ಮೂರು ವರ್ಷಗಳ ಹಿಂದೆ ವಿಚ್ಛೇದನ ಪಡೆದುಕೊಂಡು ಇಬ್ಬರು ದೂರವಾಗಿದ್ದರು.
ಇದನ್ನೂ ಓದಿ : ರಾಜ್ಯದಲ್ಲಿ "ಪತ್ನಿ ಕಿರುಕುಳ"ದ ಪ್ರಮಾಣದಲ್ಲಿ ಶೇ 24ಕ್ಕೆ ಏರಿಕೆ: ಸಬಲೀಕರಣದಲ್ಲಿ ನಿಧಾನಗತಿ ಉನ್ನತಿ
ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರಿಂದ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವ ಬಗ್ಗೆ ಇಬ್ಬರ ನಡುವೆ ಒಪ್ಪಂದವಾಗಿತ್ತು. ಇದೇ ಭರವಸೆಯಿಂದಲೇ ಗಂಡನ ಮನೆಯಲ್ಲಿ ಮಗಳನ್ನು ಬಿಟ್ಟು ಹೆಂಡತಿ ದೂರವಾಗಿದ್ದಳು. ದಿನ ಕಳೆದಂತೆ ಮಗಳ ಮೇಲೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಲು ತಂದೆ ಆರಂಭಿಸಿದ್ದ. ಸತತ ಮೂರು ವರ್ಷಗಳ ಕಾಲ ಕಿರುಕುಳ ನೀಡಿದ್ದ. ಮಗಳೊಂದಿಗೆ ತಾಯಿ ಮಾತನಾಡಲು ಸಹ ಬಿಟ್ಟಿರಲಿಲ್ಲ. ಸತತ ಪ್ರಯತ್ನ ನಂತರ ಕಳೆದ ತಿಂಗಳು ಮಗಳನ್ನು ತಾಯಿ ಭೇಟಿಯಾಗಿದ್ದು ಈ ವೇಳೆ ತಂದೆ ನೀಡುತ್ತಿದ್ದ ಕಿರುಕುಳದ ಬಗ್ಗೆ ಹೇಳಿ ಮಗಳು ಅಳಲು ತೋಡಿಕೊಂಡಿದ್ದಾಳೆ.
ಡೈರಿಯಲ್ಲಿ ತಂದೆ ನೀಡುತ್ತಿದ್ದ ಕಿರುಕುಳದ ಪ್ರಸ್ತಾಪ:
ಜನ್ಮ ಕೊಟ್ಟವನ ವಿರುದ್ಧವೇ ಅಪ್ರಾಪ್ತ ವಯಸ್ಸಿನ ಮಗಳು ಆರೋಪ ಮಾಡಿದ್ದಾಳೆ. ದೇಹದ ಬಗ್ಗೆ ಅಪಹಾಸ್ಯ, ನಿರಂತರ ಕಿರಿಕಿರಿ, ಬಾತ್ ರೂಮ್ಗೆ ಹೋದರೆ ಬಾಗಿಲು ಹಾಕಿಕೊಳ್ಳದಂತೆ ಕಿರುಕುಳ ಸೇರಿದಂತೆ ಹಲವು ರೀತಿಯಲ್ಲಿ ಶೋಷಣೆ ನೀಡುತ್ತಿದ್ದರ ಬಗ್ಗೆ ತನ್ನ ಬಳಿಯಿದ್ದ ಡೈರಿಯಲ್ಲಿ ಬರೆದುಕೊಂಡಿದ್ದಳು. ತಾಯಿ ಭೇಟಿಯಾದಾಗ ಅಪ್ಪ ಕೊಡುತ್ತಿದ್ದ ಕಿರುಕುಳ ಬಗ್ಗೆ ಹೇಳಿ ಅಲವತ್ತುಕೊಂಡಿದ್ದಳು. ಈ ಸಂಬಂಧ ಸಂಪಿಗೆಹಳ್ಳಿ ಠಾಣೆಗೆ ಬಾಲಕಿಯ ತಾಯಿ ದೂರು ನೀಡಿದನ್ವಯ ತಂದೆಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಲಾಗಿದೆ.