ಬೆಂಗಳೂರು : ಉದ್ಯೋಗದಲ್ಲಿದ್ದ ಪತ್ನಿಗೆ ಕಿರುಕುಳ ನೀಡಿದ್ದ ನಿರುದ್ಯೋಗಿ ಪತಿಗೆ ಐಪಿಸಿ ಸೆಕ್ಷನ್ 498ಎ (ಹಿಂಸೆ) ಪ್ರಕರಣದಡಿ ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಇದೀಗ ನ್ಯಾಯಾಲಯ ವಿಧಿಸಿದ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಪ್ರಕರಣದಲ್ಲಿ ತನಗೆ ಶಿಕ್ಷೆ ವಿಧಿಸಿ ಜೆಎಂಎಫ್ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಚಿತ್ರದುರ್ಗದ ಎಚ್.ಡಿ. ನವೀನ್ ಎಂಬುವರು ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ ಅವರ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಅಲ್ಲದೆ, ಆರೋಪಿ ನವೀನ್ ನಿರುದ್ಯೋಗಿಯಾಗಿದ್ದಾನೆ. ಬಿಎ ಪದವೀಧರೆಯಾಗಿರುವ ಆತನ ಪತ್ನಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದರೂ ಬಹುಶಃ ಈ ವಿಚಾರದಲ್ಲಿ ನವೀನ್‌ಗೆ ಕೀಳರಿಮೆ ಉಂಟಾಗಿರಬಹುದು. ಇದೇ ಕಾರಣಕ್ಕೆ ಪತಿ ನವೀನ್ ಮತ್ತು ಆತನ ಕುಟುಂಬ ಸದಸ್ಯರು ಹೆಚ್ಚುವರಿ ವರದಕ್ಷಿಣೆಗೆ ಬೇಡಿಕೆಯಿಟ್ಟು ದೀಪಶ್ರೀಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಿರಬಹುದು.
ಕಿರುಕುಳ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ಕೆಲವರು ಅದನ್ನು ಸಹಿಸಿಕೊಳ್ಳುತ್ತಾರೆ. ಕೆಲವರು ಮೌನವಾಗಿದ್ದುಕೊಂಡೇ ನರಳಾಡುತ್ತಾರೆ. ದುರ್ಬಲ ಮನಸ್ಸಿನವರು ಇಂತಹ ಕಿರುಕುಳ ಸಹಿಕೊಳ್ಳಲಾರದೆ ತಮ್ಮ ಜೀವನನ್ನೇ ಕಳೆದುಕೊಳ್ಳುತ್ತಾರೆ. ಅದೃಷ್ಟವಶಾತ್ ಪ್ರಕರಣದಲ್ಲಿ ಸಂತ್ರಸ್ತೆಯ ಆತ್ಮಹತ್ಯೆ ಪ್ರಚೋದನೆಗೆ ಕಾರಣವಾಗಿಲ್ಲ. ಕೆಟ್ಟದಾಗಿ ನಡೆಸಿಕೊಂಡ ಮತ್ತು ಕಿರುಕುಳದ ಬಗ್ಗೆ ದೂರುದಾರೆ ಹೇಳಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.
ಅಪರಾಧ ಎಸಗುವ ಉದ್ದೇಶದಿಂದ ನೀಡುವ ಕಿರುಕುಳ ಕೇವಲ ದೈಹಿಕವಾಗಿಯೇ ಇರಬೇಕೆಂದಿಲ್ಲ. ಮಾನಸಿಕ ಕಿರುಕುಳ ಮತ್ತು ಅಸಹಜ ನಡವಳಿಕೆಯೂ ಸಹ ಕ್ರೌರ್ಯ ಅಥವಾ ಕಿರುಕುಳ ಎಂದೆನಿಸಿಕೊಳ್ಳುತ್ತದೆ. ಈ ಪ್ರಕರಣದಲ್ಲಿ ತವರು ಮನೆಗೆ ಹೋದ ಪತ್ನಿಯನ್ನು ವಾಪಸ್ ಕರೆತಂದು ಆಕೆಯೊಂದಿಗೆ ಸಂತಸದಿಂದ ಜೀವನ ನಡೆಸುವ ಯಾವುದೇ ಪ್ರಯತ್ನ ನವೀನ್ ಮಾಡಿಲ್ಲ. ಆಕೆಯ ಬಗ್ಗೆ ಪ್ರೀತಿ ಮತ್ತು ವಾತ್ಸಲ್ಯವನ್ನು ಹೊಂದಿರಲಿಲ್ಲ. ಆರೋಪಿಯು ಪತ್ನಿಗೆ ಕಿರುಕುಳ ನೀಡಿರುವುದು ಸಾಕ್ಷ್ಯಾಧಾರಗಳ ಸಮೇತ ಸಾಬೀತಾಗಿದ್ದು, ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯಗಳ ಆದೇಶ ಸೂಕ್ತವಾಗಿದೆ ಎಂದು ತಿಳಿಸಿದ ಹೈಕೋರ್ಟ್ ಅರ್ಜಿ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರ ನವೀನ್ ಮತ್ತು ದೀಪಶ್ರೀ 2007 ರ ಜು.9 ರಂದು ದೀಪಶ್ರೀ ಎಂಬುವವರನ್ನು ಚಿತ್ರದುರ್ಗದಲ್ಲಿ ಮದುವೆಯಾಗಿದ್ದರು. ಆದರೆ, 2008 ರಲ್ಲಿ ದೀಪಶ್ರೀ ಪತಿಯ ವಿರುದ್ಧ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದರು. ಬಳಿಕ ಪ್ರಕರಣ ಚಿತ್ರದುರ್ಗ ಟೌನ್ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು.
ಮದುವೆ ನಂತರ ಪತಿ ಮನೆಗೆ ದೀಪಶ್ರೀ ತೆರಳಿದ್ದರು. ಮನೆಯಲ್ಲಿ ದಂಪತಿ ಸೇರಿ ಒಟ್ಟು ಕುಟುಂಬ ಸದಸ್ಯರು ನೆಲೆಸಿದ್ದರು. ಮದುವೆ ವೇಳೆ ವರದಕ್ಷಿಣೆ ನೀಡಿದ್ದರೂ ಅದಕ್ಕೆ ತೃಪ್ತರಾಗದೆ ನವೀನ್ ಮತ್ತು ಕುಟುಂಬ ಸದಸ್ಯರು ದೀಪಶ್ರೀಗೆ ನಿತ್ಯ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಾ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಕೆಲ ಸಂದರ್ಭಗಳಲ್ಲಿ ಕ್ರಿಕೆಟ್ ಬ್ಯಾಟಿನಿಂದ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದ. ಇದರಿಂದ ಆಕೆ ಬೇಸತ್ತು ದೀಪಶ್ರೀ ತವರು ಮನೆಗೆ ಹೋಗಿದ್ದ. ಆದರೆ, ಗಂಡನ ಮನೆಗೆ ವಾಪಸ್ಸಾದಾಗ ಒಳಗಡೆ ಬಿಟ್ಟುಕೊಳ್ಳದೆ. ರಾತ್ರಿ ಪೂರ್ತಿ ಹೊರಗಡೆ ನಿಲ್ಲಿಸಿದ್ದರು ಎಂದು ದೂರಿನಲ್ಲಿ ದೀಪಶ್ರೀ ತಿಳಿಸಿದ್ದರು.
ಈ ದೂರಿನ ತನಿಖೆ ಪೂರ್ಣಗೊಳಿಸಿದ್ದ ಪೊಲೀಸರು, ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಜೆಎಂಎಫ್‌ಸಿ ನ್ಯಾಯಲಯ, ನವೀನ್ ಅನ್ನು ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯಡಿ ದೋಷಿಯಾಗಿ ತೀರ್ಮಾನಿಸಿ ಎರಡು ವರ್ಷ ಜೈಲು ಶಿಕ್ಷೆ ಮತ್ತು ಒಟ್ಟು 17 ಸಾವಿರ ರು. ದಂಡ ವಿಧಿಸಿ 2012 ರ ನ9 ರಂದು ಆದೇಶಿಸಿತ್ತು. ಈ ಆದೇಶವನ್ನು 2014 ರ ಜು.31ರಂದು ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಪುರಸ್ಕರಿಸಿತ್ತು. ಈ ಎರಡೂ ನ್ಯಾಯಲಯಗಳ ಆದೇಶ ರದ್ದು ಕೋರಿ ನವೀನ್ ಹೈಕೋರ್ಟ್ ಮೊರೆ ಹೋಗಿದ್ದ.
ಇದನ್ನೂ ಓದಿ : ಮತದಾರರ ಪಟ್ಟಿ ಪರಿಷ್ಕರಣೆ: ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ಆದೇಶ ಎತ್ತಿ ಹಿಡಿದ ದ್ವಿಸದಸ್ಯ ಪೀಠ