ಹೊಸಕೋಟೆ: ತಾಲೂಕಿನಲ್ಲಿ ಪ್ರತೀ ದಿನ ಸುಮಾರು 300-350 ಕೋವಿಡ್ ಪರೀಕ್ಷೆಗಳನ್ನು ಮಾಡುತ್ತಿದ್ದು, ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ವೋಲ್ವೋ ಕಂಪನಿಯವರು ನೀಡಿದ ಕೋವಿಡ್ ಪರೀಕ್ಷಾ ಬೂತ್ಗಳನ್ನು ಆಸ್ಪತ್ರೆಗೆ ಹಸ್ತಾಂತರಿಸಿ ಅವರು ಮಾತನಾಡಿದರು. ವೋಲ್ವೋ ಕಂಪನಿಯವರು ಲಾಕ್ಡೌನ್ ಸಮಯದಿಂದಲೂ ಜನತೆಗೆ ಉಚಿತವಾಗಿ ಆಹಾರದ ಪೊಟ್ಟಣಗಳನ್ನು ವಿತರಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಔಷಧಿ, ಸ್ಯಾನಿಟೈಸರ್, ಮಾಸ್ಕ್ ನೀಡಿದ್ದಾರೆ. ಎಂವಿಜೆ ಆಸ್ಪತ್ರೆಗೂ ಇದೇ ರೀತಿ ಕೊಡುಗೆ ನೀಡಿದ್ದಾರೆ ಎಂದರು.
ಇದೀಗ 7 ಕೋವಿಡ್ ಪರೀಕ್ಷಾ ಬೂತ್ಗಳನ್ನು ತಾಲೂಕಿಗೆ ನೀಡಿದ್ದು, ಅದನ್ನು ಮುಗಬಾಳ, ಅನುಗೊಂಡನಹಳ್ಳಿ ಸೇರಿದಂತೆ ತಾಲೂಕಿನ ವಿವಿಧ ಆಸ್ಪತ್ರೆಗಳಿಗೆ ನೀಡಲಾಗಿದೆ. ಸ್ಥಳೀಯವಾಗಿಯೇ ಪರೀಕ್ಷೆ ಮಾಡಿಸಲು ಅನುಕೂಲ ಮಾಡಿಕೊಡುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭ ವೋಲ್ವೋ ಕಂಪನಿಯ ರಾವ್, ಜಿಲ್ಲಾ ಪಂಚಾಯತ್ ಸದಸ್ಯರಾದ ಕೃಷ್ಣಮೂರ್ತಿ, ನಗರಸಭಾ ಸದಸ್ಯರಾದ ಗೌತಮ್, ಮುಖಂಡರಾದ ಬೈರೇಗೌಡ, ನಾಗರಾಜ್, ತಾಲೂಕು ವೈದ್ಯಾಧಿಕಾರಿಗಳಾದ ಡಾ. ಮಂಜುನಾಥ್, ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಸತೀಶ್ ಹಾಗೂ ಇತರರು ಉಪಸ್ಥಿತರಿದ್ದರು.