ಬೆಂಗಳೂರು: ಎಚ್ಎಎಲ್ ಸಂಸ್ಥೆಯು 80 ಆಕ್ಸಿಜನ್ ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರ ಸ್ಥಾಪಿಸಿದ್ದು, ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಏರ್ಪೋರ್ಟ್ ರಸ್ತೆಯಲ್ಲಿರುವ ಹೆಚ್ಎಎಲ್ ಸಂಸ್ಥೆಯು ಗಾಟ್ಗೆ ಸಮುದಾಯ ಭವನವನ್ನು 80 ಹಾಸಿಗೆಗಳ ಕೋವಿಡ್ ಚಿಕಿತ್ಸಾ ಕೇಂದ್ರವನ್ನಾಗಿ ಪರಿವರ್ತಿಸಿದೆ. 80 ಆಕ್ಸಿಜನ್ ಬೆಡ್ಗಳ ಈ ಆಸ್ಪತ್ರೆಯನ್ನು ಸರ್ಕಾರಕ್ಕೆ ಹಸ್ತಾಂತರಿಸಲು ಸಜ್ಜಾಗಿದೆ. ಕೆಲವು ದಿನಗಳಲ್ಲಿ ಹೆಚ್ಚುವರಿಯಾಗಿ 80 ಬೆಡ್ಗಳನ್ನು ನಿಯೋಜಿಸುವುದಾಗಿ ಸಂಸ್ಥೆ ಹೇಳಿದೆ.
ಬಿಬಿಎಂಪಿ, ವೈದ್ಯಕೀಯ ಸಿಬ್ಬಂದಿ ಅಗತ್ಯ ಸೇವೆಗಳನ್ನು ನೋಡಿಕೊಳ್ಳಬೇಕು. ಸ್ಥಳದ ಜವಾಬ್ದಾರಿ ಮಾತ್ರ ಹೆಚ್ಎಎಲ್ ಸಂಸ್ಥೆಯದ್ದು. ಆಕ್ಸಿಜನ್ ಹೊಂದಿರುವ ಬೆಡ್ಗಳು ರೆಡಿಯಾಗಿದ್ದು, ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳಬಹುದು ಎಂದು ತಿಳಿಸಿದೆ.
ಬಿ.ಎ. ಬಸವರಾಜ ಮಾತನಾಡಿ, ಎಚ್ಎಎಲ್ನಲ್ಲಿರುವ ಕೋವಿಡ್ ಕೇಂದ್ರದಲ್ಲಿ 80 ಆಕ್ಸಿಜನ್ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಇನ್ನೂ 80 ಹಾಸಿಗೆಗಳ ವ್ಯವಸ್ಥೆ ಕಲ್ಪಿಸುವುದಾಗಿ ಸಂಸ್ಥೆ ಹೇಳಿದೆ. ಇದರಿಂದ ಬೆಡ್ಗಳ ಕೊರತೆ ಸ್ವಲ್ಪ ಮಟ್ಟಿಗೆ ಕಡಿಮೆ ಆಗುತ್ತದೆ ಎಂದರು.
ಐಟಿಐ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಬಳಸಿಕೊಳ್ಳುವುದರ ಜೊತೆಗೆ ಕೆ.ಆರ್.ಪುರದಲ್ಲಿರುವ 100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯನ್ನು ಉನ್ನತೀಕರಣಗೊಳಿಸುವಂತೆ ಆರೋಗ್ಯ ಸಚಿವರಿಗೆ ಮನವಿ ಮಾಡಲಾಗಿದೆ. ಐಟಿಐ ಆಸ್ಪತ್ರೆ ನಾಲ್ಕು ವಾರಗಳಲ್ಲಿ ಸಿದ್ಧಗೊಳಿಸಿ ನಮ್ಮ ಸುರ್ಪದಿಗೆ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ, ಈ ಆಸ್ಪತ್ರೆಗಳ ಬಳಕೆಯಿಂದಾಗಿ ಕೆ.ಆರ್.ಪುರ ಕ್ಷೇತ್ರದ ಜನತೆಗೆ ಬಹಳ ಅನುಕೂಲವಾಗುತ್ತದೆ. ಕೋವಿಡ್‌ನ ಮೂರನೆ ಸಂಭಾವ್ಯ ಅಲೆ ಬರುವ ಸಾಧ್ಯತೆಯಿದೆ. ಅದಕ್ಕಾಗಿಯೂ ಈ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಲಾಕ್‌ಡೌನ್ ಅನ್ನು ಮೇ 24ರ ಬಳಿಕವೂ ವಿಸ್ತರಣೆ ಮಾಡಿದರೆ ಕೋವಿಡ್ ಅನ್ನು ಮತ್ತಷ್ಟು ನಿಯಂತ್ರಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು. ಈಗಾಗಲೆ ಜನಸಾಮಾನ್ಯರಿಗೆ ತೊಂದರೆ ಆಗದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ ಎಂದರು.
ಈಗಿರುವ ರೀತಿಯಲ್ಲೆ ಇನ್ನೂ ಕೆಲವು ದಿನಗಳ ಕಾಲ ಲಾಕ್‌ಡೌನ್ ಮುಂದುವರೆಸಿದರೆ ಒಳ್ಳೆಯದು ಕೆಲವು ದಿನಗಳಿಂದ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ಕಡಿಮೆ ಆಗೂವವರೆಗೂ ಮುಂದುವರೆದರೆ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.