ಬೆಂಗಳೂರು: ರಾಜ್ಯದ ಹದಿನೈದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಗೆಲುವಿನ ವಿಶ್ವಾಸವಿಲ್ಲದ ಕಾರಣ ವಿಧಾನಮಂಡಲದ ಅಧಿವೇಶನವನ್ನು ಮೂರು ದಿನಕ್ಕೆ ಮೊಟಕುಗೊಳಿಸಲಾಗಿದೆ. ಸರ್ಕಾರ ಮುಂದುವರೆಯುತ್ತದೆಯೋ, ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಹಾಗೂ ಅವರ ಮಂತ್ರಿ ಮಂಡಲಕ್ಕೆ ಕಾರ್ಮೋಡ ಕವಿದಿದೆ ಎಂದರು. ಕಳೆದ ಅಧಿವೇಶನದಲ್ಲೇ ಪೂರ್ಣ ಪ್ರಮಾಣದ ಬಜೆಟ್ಗೆ ಒಪ್ಪಿಗೆ ಪಡೆಯಬಹುದಿತ್ತು. ಆದರೆ, ಮತ್ತೊಂದು ಬಜೆಟ್ ಮಂಡಿಸುವ ಉದ್ದೇಶದಿಂದ ಲೇಖಾನುದಾನ ಪಡೆಯಲಾಗಿತ್ತು. ಈಗ ವಿಧಾನಸಭೆ ಉಪಚುನಾವಣೆ ನೀತಿಸಂಹಿತೆ ನೆಪವೊಡ್ಡಿ ಹತ್ತು ದಿನಗಳ ಕಾಲ ಕರೆಯಲಾಗಿದ್ದ ಅಧಿವೇಶನವನ್ನು ಮೂರು ದಿನಕ್ಕೆ ಸೀಮಿತಗೊಳಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಲಾಖಾವಾರು ಬೇಡಿಕೆಗಳ ಮೇಲೆ ಚರ್ಚೆಯಾಗಿಲ್ಲ. ಈಗ ಮೂರು ದಿನಕ್ಕೆ ಅಧಿವೇಶನ ಸೀಮಿತಗೊಳಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಸರಣಿ ಸಭೆ ಮಾಡುತ್ತಿದ್ದೇವೆ. ಕಾರ್ಯಕರ್ತರ ಅಭಿಪ್ರಾಯ ಕೇಳುತ್ತಿದ್ದು, ಅವರು ಹೇಳುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ. ನಾಳೆ ಸಂಸದೀಯ ಮಂಡಳಿ ಸಭೆ ಇದ್ದು, ಅಲ್ಲಿ ಚರ್ಚೆ ನಡೆಸಿ ಹದಿನೇಳು ಅಭ್ಯರ್ಥಿಗಳ ಆಯ್ಕೆಯ ಅಂತಿಮ ನಿರ್ಣಯ ಕೈಗೊಳ್ಳುತ್ತೇವೆ ಎಂದು ಹೇಳಿದರು.