ಬೆಂಗಳೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ರಾಜಕೀಯವಾಗಿ ಮುಗಿಸುವುದೇ, ಬಿಜೆಪಿ ಹಾಗೂ ಕಾಂಗ್ರೆಸ್ನ ಗುರಿಯಾಗಿತ್ತು ಎಂದು ಹೆಚ್. ಡಿ. ರೇವಣ್ಣ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸೋಲಿನಿಂದ ದೇವೇಗೌಡರಿಗೆ ಏನು ನಷ್ಟವಾಗಿಲ್ಲ. ರಾಜ್ಯದ ಜನರಿಗೆ ನಷ್ಟವಾಗಿದೆ ಎಂದರು. ಅನೇಕ ರಾಜಕೀಯ ಅಸ್ತ್ರಗಳನ್ನು ಪ್ರಯೋಗಿಸಿ, ದೇವೇಗೌಡರನ್ನು ಸೋಲಿಸಲಾಗಿದೆ ಎಂದು ಅವರು ಬಿಜೆಪಿ ಹಾಗೂ ಕಾಂಗ್ರೆಸ್ನ್ನು ಕಟುವಾಗಿ ಟೀಕಿಸಿದರು.
ಸಿಎಂ ಯಡಿಯೂರಪ್ಪನವರು ನೂರು ದಿನಗಳ ಆಚರಣೆ ಮಾಡುತ್ತಿದ್ದು, ಅವರ ಸರ್ಕಾರದ ಸಾಧನೆ ಏನೆಂದು ಪ್ರಶ್ನೆ ಮಾಡಿದ್ದಾರೆಂದು ಪ್ರಶ್ನಿಸಿದರು. ಐಎಂಎ ಸಂಸ್ಥೆಯಿಂದ ಸಾವಿರಾರು ಕೋಟಿ ವಂಚನೆಯಾಗಿದೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು. ಅಪೆಕ್ಸ್ ಬ್ಯಾಂಕ್ನಿಂದ ಪ್ರತಿ ವರ್ಷ 60 ಕೋಟಿ ನಷ್ಟ ಆಗುತ್ತಿದ್ದು, ಬ್ಯಾಂಕ್ನ ಅಕ್ರಮದ ಬಗ್ಗೆ ಸಿಬಿಐ ಅಧಿಕಾರಿ ಬರೆದಿದ್ದಾರೆ ಎಂದು ತಿಳಿಸಿದರು. ಸಹಕಾರ ಇಲಾಖೆಯ ಜಂಟಿ ರಿಜಿಸ್ಟ್ರಾರ್ ನರಸಿಂಹ ಮೂರ್ತಿ ಅಕ್ರಮ ಮಾಡಿದ್ದು, ಅವರ ಮೇಲೆಯೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಇದು ಬಿಎಸ್ವೈ ಸಾಧನೆಯೇ ಎಂದು ಕೇಳಿದರು.
ನೆರೆಯಿಂದ ಹಾನಿಯಾಗಿರುವ ಕೆ.ಆರ್.ಪೇಟೆ ತಾಲೂಕಿನ ಕೆರೆಗಳ ವಿವಿಧ ಕಾಮಗಾರಿಗಳಿಗೆ, '4ಜಿ'ಯಡಿ ವಿನಾಯಿತಿ ನೀಡಲು ಸಿಎಂಗೆ ಅನರ್ಹ ಶಾಸಕ ನಾರಾಯಣಗೌಡ ಪತ್ರ ಬರೆದಿದ್ದರು. ಅದಕ್ಕೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಒಟ್ಟು 10 ಕೋಟಿ ರೂ. ಕಾಮಗಾರಿಗಳಿಗೆ '4ಜಿ'ಯಡಿ ಟೆಂಡರ್ ನಿಂದ ವಿನಾಯಿತಿ ನೀಡಿ, ಕೂಡಲೇ ಕಾಮಗಾರಿ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ. ಆದರೆ ಕಾವೇರಿ ಜಲಾನಯನ ಪ್ರದೇಶದಲ್ಲಿನ ಸುಮಾರು 7,650 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳನ್ನು ನಿಲ್ಲಿಸಲಾಗಿದೆ ಎಂದು ಆರೋಪಿಸಿದರು.
ಸಹಕಾರ ಸಚಿವರಾದ ಬಸವರಾಜ ಬೊಮ್ಮಾಯಿ ಕೈಯ್ಯಲ್ಲಿ ಏನೂ ಇಲ್ಲ. ದೇವೇಗೌಡರನ್ನು ದಿನಬೆಳಗಾದರೆ ಬೈಯ್ಯುತ್ತಾರಲ್ಲ ಅವರೇ ಎಲ್ಲವನ್ನೂ ಮಾಡಿಸುತ್ತಿದ್ದಾರೆಂದು ಪರೋಕ್ಷವಾಗಿ ಕೆ.ಎನ್.ರಾಜಣ್ಣಗೆ ಟಾಂಗ್ ನೀಡಿದರು.