ಗಂಗಾವತಿ/ಬೆಂಗಳೂರು: ನಗರದಲ್ಲಿ ಕಾನೂನುಬಾಹಿರವಾಗಿ ಅಂದರ್-ಬಾಹರ್, ಇಸ್ಪೀಟ್ ಕ್ಲಬ್ ಮತ್ತು ಕನಕಗಿರಿ, ಕಾರಟಗಿ ಮತ್ತು ಗಂಗಾವತಿ ತಾಲೂಕಿನಲ್ಲಿ ನಡೆಯುತ್ತಿರುವ ಮೀಟರ್ ಬಡ್ಡಿಯ ವಿಚಾರವಾಗಿ ಸದನದಲ್ಲಿ ಚರ್ಚೆ ನಡೆಯಿತು.
ಮಧ್ಯಾಹ್ನದ ಬಳಿಕ ಸದನದಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ತಮಗೆ ಲಭಿಸಿರುವ ದಾಖಲೆ ಅನ್ವಯ ಈ ಬಗ್ಗೆ ಪ್ರಸ್ತಾಪಿಸಿ ಸ್ಪೀಕರ್ ಗಮನಕ್ಕೆ ತರಲು ಯತ್ನಿಸಿದರು.
ಗಂಗಾವತಿಯಲ್ಲಿ 20ಕ್ಕೂ ಹೆಚ್ಚು ಇಸ್ಪೀಟ್ ಕ್ಲಬ್ಗಳಿವೆ. ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದ್ದರೂ ಪೊಲೀಸರು ಕಣ್ಣುಮುಚ್ಚಿ ಕುಳಿತ್ತಿದ್ದಾರೆ. ಮೀಟರ್ ಬಡ್ಡಿಗೆ ಹಣಕೊಟ್ಟು ಇಸ್ಪೀಟ್ ಆಡಿಸಲು ಕೆಲವರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದರು.
ಕನಕಗಿರಿ, ಗಂಗಾವತಿ ಮತ್ತು ಕಾರಟಗಿಯಲ್ಲಿ ಮೀಟರ್ ಬಡ್ಡಿಯ ಹಾವಳಿ ಹೆಚ್ಚಾಗಿದೆ. ಸಾಲಗಾರರ ಕಿರುಕುಳಕ್ಕೆ ಮಹಿಳೆಯರು ರೋಸಿ ಹೋಗಿದ್ದಾರೆ. ಮರ್ಯಾದೆಗೆ ಹೆದರಿ ದೂರು ನೀಡಲು ಮುಂದಾಗುತ್ತಿಲ್ಲ. ದುಬಾರಿ ಮೀಟರ್ ಬಡ್ಡಿಗೆ ತ್ರಿವಳಿ ತಾಲೂಕಿನ ಜನ ತಲ್ಲಣಗೊಂಡಿದ್ದಾರೆ ಎಂದರು.
ನಾನು ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಋಣಮುಕ್ತ ಕಾಯ್ದೆ ಜಾರಿಗೆ ತಂದು ರಾಷ್ಟ್ರಪತಿಗಳಿಂದ ಅಂಕಿತ ಹಾಕಿಸಿದ್ದೆ. ಆದರೆ, ಇದೀಗ ಬಡ್ಡಿ, ಮೀಟರ್ ಬಡ್ಡಿ ಹೆಚ್ಚಾಗಿದ್ದು, ಈ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
ಇದನ್ನೂ ಓದಿ: ಸಾಮಾಜಿಕ ಮಾಧ್ಯಮ ಪ್ರಚಾರ, ಜಾಗೃತಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ: ಅಶ್ವತ್ಥ ನಾರಾಯಣ