ಬೆಂಗಳೂರು: ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ವಿರುದ್ಧ ಠೇವಣಿದಾರರ ಆನ್ಲೈನ್ ಪ್ರತಿಭಟನೆ ಕಳೆದ ರಾತ್ರಿ 8 ಗಂಟೆಗೆ ಫೇಸ್ಬುಕ್ ಲೈವ್ ಮೂಲಕ ಪ್ರಾರಂಭವಾಯಿತು.
35 ಸಾವಿರ ಡೆಪಾಸಿಟರ್ಸ್ಗಳ ಹಣ ಇನ್ನೂ ಕೈ ಸೇರದ ಹಿನ್ನೆಲೆಯಲ್ಲಿ ಬ್ಯಾಂಕ್ ಮುಂದೆ ನಿಂತು ಪ್ರತಿಭಟನೆ ಮಾಡಲು ಆಗುವುದಿಲ್ಲ. ಹೀಗಾಗಿ ಫೇಸ್ಬುಕ್ ಲೈವ್‌ಗೆ ಬಂದಿದ್ದೇವೆ. ಈಗಾಗಲೇ ನಾನಾ ಕಾರಣದಿಂದ 43 ಜನ ಠೇವಣಿದಾರರು ಸಾವಿಗೀಡಾಗಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಕಳೆದ ವರ್ಷ ಜನವರಿಯಲ್ಲಿ ಬ್ಯಾಂಕ್ ವಿತ್ ಡ್ರಾ(ಹಣ ಹಿಂತೆಗೆತ) ಲಿಮಿಟ್ 35 ಸಾವಿರಕ್ಕೆ ಆರ್ಬಿಐ ನಿಗದಿ ಮಾಡಿತ್ತು. ಕೆಲ ಅಕ್ರಮ ನಡೆದ ಕಾರಣ ವಿತ್ ಡ್ರಾ ಹಣವನ್ನು ಇಳಿಕೆ ಮಾಡಲಾಗಿತ್ತು. ಈ ಬಗ್ಗೆ ಅನುಮಾನಗೊಂಡ ಠೇವಣಿದಾರರು ಈ ನಿರ್ಧಾರವನ್ನು ಪ್ರಶ್ನೆ ಮಾಡಿದ್ದರು. ಆಗ ಬ್ಯಾಂಕ್ ನಲ್ಲಾಗಿರುವ ಅವ್ಯವಹಾರ ಬೆಳಕಿಗೆ ಬಂದಿದೆ. ಆಗಿನಿಂದ ಈವರೆಗೆ ಪ್ರೊಟೆಸ್ಟ್ ನಡೆಸುತ್ತಲೇ ಇದ್ದರೂ ಠೇವಣಿ ಇಟ್ಟಿದ್ದ ಹಣ ಸಿಗುತ್ತಿಲ್ಲ. ಪ್ರಕರಣ ಸಿಐಡಿಗೆ ಹೋದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಠೇವಣಿದಾರರು ಆಕ್ರೋಶ ಹೊರಹಾಕುತ್ತಿದ್ದಾರೆ.