ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಸರ್ಕಾರದ ಸಚಿವಾಲಯ ಸೇರಿದಂತೆ ರಾಜ್ಯ ಮಟ್ಟದ ಎಲ್ಲಾ ಇಲಾಖಾ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವರ್ಗದ ಅಧಿಕಾರಿ/ಸಿಬ್ಬಂದಿಯವರು ಕರ್ತವ್ಯ ನಿರ್ವಹಿಸುವ ಬಗ್ಗೆ ಉಲ್ಲೇಖಿತ ಆದೇಶಗಳು ಮತ್ತು ಸುತ್ತೋಲೆಯಲ್ಲಿ ರಾಜ್ಯ ಸರ್ಕಾರದಿಂದ ಕೆಲವು ಮಾರ್ಗಸೂಚಿಗಳನ್ನು ಮತ್ತು ನಿರ್ದೇಶನವನ್ನು ನೀಡಲಾಗಿದೆ.
ಈ ಆದೇಶದಲ್ಲಿ ಅತ್ಯಗತ್ಯ ಸೇವೆಯನ್ನು ಒದಗಿಸುತ್ತಿರುವ ಇಲಾಖೆಗಳನ್ನು ಹೊರತುಪಡಿಸಿ, ರಾಜ್ಯ ಸರ್ಕಾರದ ಎಲ್ಲಾ ಕಚೇರಿಗಳು, ಅರೆ ಸರ್ಕಾರಿ, ಸ್ವಾಯತ್ತ ಸಂಸ್ಥೆ, ನಿಗಮ/ಮಂಡಳಿ/ಪ್ರಾಧಿಕಾರದ ಕಚೇರಿಗಳು ಶೇಕಡಾ 50 ರಷ್ಟು ಅಧಿಕಾರಿ/ಸಿಬ್ಬಂದಿಯೊಂದಿಗೆ ಕರ್ತವ್ಯ ನಿರ್ವಹಿಸತಕ್ಕದೆಂದು, ಉಳಿದ ಶೇಕಡಾ 50 ರಷ್ಟು ಅಧಿಕಾರಿ/ಸಿಬ್ಬಂದಿಯನ್ನು ಕೋವಿಡ್-19ರ ನಿಯಂತ್ರಣ ಮತ್ತು ನಿರ್ವಹಣಾ ಕಾರ್ಯಕ್ಕಾಗಿ ನಿಯೋಜಿಸತಕ್ಕದೆಂದು ತಿಳಿಸಲಾಗಿದೆ. ದೃಷ್ಟಿಹೀನ ಹಾಗೂ ಇತರ ದೈಹಿಕ ಅಂಗವೈಕಲ್ಯ ಹೊಂದಿರುವ ಅಧಿಕಾರಿ/ಸಿಬ್ಬಂದಿ ಮತ್ತು ಗರ್ಭಿಣಿ ಮಹಿಳಾ ಸಿಬ್ಬಂದಿ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿರುತ್ತದೆ. ಈ ಮಾರ್ಗಸೂಚಿಯು ಮೇ 4 ರ ವರೆಗೆ ಜಾರಿಯಲ್ಲಿರುತ್ತದೆ.
ಈ ಹಿನ್ನೆಲೆ, ಕರ್ನಾಟಕ ವಿಧಾನಸಭೆ ಸಚಿವಾಲಯದ (ಶಾಸಕರ ಭವನವೂ ಸೇರಿದಂತೆ) ಎಲ್ಲಾ ಅಧಿಕಾರಿ/ ನೌಕರರುಗಳು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿ ಕೊರೊನಾ ವೈರಸ್ (ಕೋವಿಡ್-19ರ) ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಮತ್ತು ಸಂಪೂರ್ಣವಾಗಿ ನಿರ್ಮೂಲನಗೊಳಿಸುವ ಸಂಬಂಧ ಸರ್ಕಾರ ಹೊರಡಿಸಿರುವ ನಿಯಮಗಳನ್ನು ಪಾಲಿಸುವುದರ ಜೊತೆಗೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಬಾಕಿ ಉಳಿದಿರುವಂತಹ ಎಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸತಕ್ಕದ್ದು. ಈ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ದೃಷ್ಟಿಹೀನ ಹಾಗೂ ಇತರ ದೈಹಿಕ ಅಂಗವೈಕಲ್ಯ ಹೊಂದಿರುವ ಅಧಿಕಾರಿ/ಸಿಬ್ಬಂದಿ ಮತ್ತು ಗರ್ಭಿಣಿ ಮಹಿಳಾ ಸಿಬ್ಬಂದಿಗೆ ಮೇ 4 ರವರೆಗೆ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ಸುತ್ತೋಲೆ ಹೊರಡಿಸಿದ್ದಾರೆ.
ಓದಿ: ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ.. ಆಮ್ಲಜನಕದ ಬಳಕೆಗೆ ಮಾರ್ಗಸೂಚಿ ಪ್ರಕಟ