ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಇಂದು ಅಧಿಕೃತವಾಗಿ ಪದಗ್ರಹಣ ಮಾಡಿದ ಡಿ.ಕೆ. ಶಿವಕುಮಾರ್ ಅವರಿಗೆ ಸಮಾರಂಭದ ವೇದಿಕೆಯಲ್ಲಿ ರಾಷ್ಟ್ರೀಯ ನಾಯಕರು ಶುಭಾಶಯ ಕೋರಿದರು.
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ರಾಷ್ಟ್ರೀಯ ನಾಯಕಿ ಪ್ರಿಯಾಂಕಾ ಗಾಂಧಿ, ಶಿವಕುಮಾರ್ ಅವರಿಗೆ ಸಮಾರಂಭ ನಡೆಯುತ್ತಿದ್ದ ಸಂದರ್ಭದಲ್ಲೇ, ದೂರವಾಣಿ ಕರೆಮಾಡಿ ಶುಭಾಶಯ ಹೇಳಿದರು.
ದಿನೇಶ್ ಗುಂಡೂರಾವ್ ಭಾಷಣ ನಡೆಸುತ್ತಿದ್ದ ಸಂದರ್ಭದಲ್ಲಿ, ರಾಹುಲ್ ಗಾಂಧಿ ಕರೆ ಮಾಡಿ ಶುಭಾಶಯ ತಿಳಿಸಿದರು. ಪಕ್ಷದ ಅಧ್ಯಕ್ಷರಾಗಿ ತಮ್ಮ ಜವಾಬ್ದಾರಿ ಹೆಚ್ಚಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲ ಗೊಳಿಸುವಂತೆ ಉತ್ತೇಜನ ನೀಡಿದರು.
ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಈಗಾಗಲೇ ಸಾಕಷ್ಟು ನಾಯಕರು ಅಧಿಕಾರ ವಹಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ರಾಷ್ಟ್ರೀಯ ನಾಯಕರು ಅಧಿಕಾರ ಸ್ವೀಕಾರ ಸಮಾರಂಭದ ವೇದಿಕೆಯಲ್ಲಿರುವ ಸಂದರ್ಭದಲ್ಲಿ ಶುಭಾಶಯ ಸಲ್ಲಿಕೆ ಮಾಡಿದರು.
ಇದನ್ನು ಖುದ್ದು ರಾಜ್ಯಸಭೆ ಸದಸ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ತಮ್ಮ ಭಾಷಣ ಸಂದರ್ಭ ಹೇಳಿದರು. ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಷ್ಟ್ರೀಯ ನಾಯಕರಿಂದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮೊದಲ ಅಧ್ಯಕ್ಷರೆಂಬ ಕೀರ್ತಿ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲುತ್ತದೆ. ಅಲ್ಲದೇ ರಾಷ್ಟ್ರೀಯ ನಾಯಕರು ಇವರ ಮೇಲೆ ಇಟ್ಟಿರುವ ನಂಬಿಕೆ ಎಷ್ಟು ಎನ್ನುವುದು ಕೂಡ ಇದರಿಂದ ಅರಿವಾಗುತ್ತದೆ ಎಂದರು.
ರಾಹುಲ್ ಗಾಂಧಿ ಸಂದೇಶ: ರಾಹುಲ್ ಗಾಂಧಿ ಶುಭ ಹಾರೈಸಿ ಡಿ.ಕೆ ಶಿವಕುಮಾರ್ ಹಾಗೂ ಕರ್ನಾಟಕ ಕಾಂಗ್ರೆಸ್ಗೆ ಅಭಿನಂದನೆಗಳು. ಡಿ.ಕೆ ಶಿವಕುಮಾರ್ ಅವರು ಕೋವಿಡ್ ಹಾಗೂ ಆರ್ಥಿಕ ಬಿಕ್ಕಟ್ಟಿನಂತಹ ಸಂಕಷ್ಟದ ಸಮಯದಲ್ಲಿ ಕರ್ನಾಟಕ ಜನರ ಹಿತಾಸಕ್ತಿಗೆ ಬದ್ಧರಾಗಿ, ಅದರಲ್ಲೂ ದುರ್ಬಲ ವರ್ಗದವರ ಕಲ್ಯಾಣಕ್ಕಾಗಿ ಕೆಲಸ ಮಾಡಲಿದ್ದಾರೆ ಎಂದು ಭಾವಿಸುತ್ತೇನೆ ಎಂದರು.
ಪಕ್ಷದ ಯಶಸ್ಸಿಗಾಗಿ ಎಲ್ಲರೂ ಶ್ರಮಿಸಬೇಕು. ಡಿ.ಕೆ ಶಿವಕುಮಾರ್ ಅವರು ಪ್ರತಿಯೊಬ್ಬ ಕಾಂಗ್ರೆಸ್ಸಿಗನನ್ನು ಜತೆಯಲ್ಲಿ ಕರೆದುಕೊಂಡು ಹೋಗಬೇಕಿದ್ದು, ಅವರು ಅದನ್ನು ಮಾಡಲಿದ್ದಾರೆ ಎಂಬ ನಂಬಿಕೆ ಇದೆ ಎಂದರು.
ಪ್ರಿಯಾಂಕಾ ಗಾಂಧಿ ಸಂದೇಶ: ಇನ್ನು ಪ್ರಿಯಾಂಕಾ ಗಾಂಧಿ ಶುಭ ಹಾರೈಸಿ, ಪದಗ್ರಹಣ ಸಂದರ್ಭದಲ್ಲಿ ಎಲ್ಲರಿಗೂ ಶುಭ ಕೋರುತ್ತೇನೆ. ಡಿ.ಕೆ ಶಿವಕುಮಾರ್ ಅವರ ವಿರುದ್ಧ ವೈಯಕ್ತಿಕವಾಗಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ರಾಜಕೀಯ ಪಿತೂರಿ ನಡೆದಿರುವುದನ್ನು ನಾವು ನೋಡಿದ್ದೇವೆ. ಇದನ್ನು ಅವರು ಬಹಳ ಧೈರ್ಯದಿಂದ ಎದುರಿಸಿ ಕಠಿಣ ಪರಿಸ್ಥಿತಿಯಲ್ಲಿ ಅವರು ಪಕ್ಷದ ಪರವಾಗಿಯೇ ನಿಂತು ತಮ್ಮ ನಿಷ್ಠೆ ತೋರಿದ್ದಾರೆ ಎಂದರು.
ಇದು ಸವಾಲು ಎದುರಿಸುವ ಇತರೆ ಎಲ್ಲಾ ಕಾಂಗ್ರೆಸಿಗರಿಗೂ ಮಾದರಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು, ನಮ್ಮ ಸಿದ್ಧಾಂತ ಕಾಪಾಡಲು, ಸತ್ಯವನ್ನು ಎತ್ತಿ ಹಿಡಿಯುವ ಸರ್ಕಾರದ ವಿರುದ್ಧದ ಹೋರಾಟದಲ್ಲಿ ನಾವೆಲ್ಲರೂ ಹೆಗಲಿಗೆ ಹೆಗಲು ಕೊಟ್ಟು ಮುಂದೆ ಸಾಗಬೇಕು. ಇದಕ್ಕೆ ಎಲ್ಲರೂ ಸಹಕರಿಸುತ್ತಾರೆ ರಂದು ಭಾವಿಸಿ ಮತ್ತೊಮ್ಮೆ ಎಲ್ಲರಿಗೂ ಅಭಿನಂದನೆ ತಿಳಿಸುತ್ತೇನೆ ಎಂದರು.
ಈ ರೀತಿ ಇಂದು ಮೂವರು ಕಾರ್ಯಧ್ಯಕ್ಷರ ಜೊತೆ ಅಧ್ಯಕ್ಷರಾಗಿ ಅಧಿಕೃತ ಪದಗ್ರಹಣ ಮಾಡಿಕೊಂಡ ಡಿಕೆಶಿ ರಾಷ್ಟ್ರೀಯ ನಾಯಕರ ಶುಭಾಶಯದ ಜೊತೆ ಸಾಕಷ್ಟು ನಿರೀಕ್ಷೆಯನ್ನು ಹೊಂದಿರುವ ಸೂಚನೆಯನ್ನು ಕೂಡ ಪಡೆದಿದ್ದಾರೆ.