ಬೆಂಗಳೂರು: ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಡವರಿಗೆ ಹಾಗೂ ಮಹಿಳೆಯರಿಗೆ ವಿಶೇಷ ಅನುದಾನವನ್ನು ಘೋಷಿಸಿದ್ದಾರೆ. ಆದರೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಯಾವುದೇ ಅನುದಾನ ಘೋಷಿಸದಿರುವುದು ದುಃಖದ ಸಂಗತಿಯಾಗಿದೆ ಎಂದು ಕಾಸಿಯಾ ಅಧ್ಯಕ್ಷ ರಾಜು ಬೇಸರ ವ್ಯಕ್ತಪಡಿಸಿದ್ದಾರೆ.
ಕೃಷಿ ಜೊತೆಗೆ ಈಗ ಸಣ್ಣ ಕೈಗಾರಿಕೆಗಳು ದೇಶದ ಬೆನ್ನೆಲುಬು, ದೇಶದ ಜಿಡಿಪಿ ಹೆಚ್ಚಳವಾಗಬೇಕು ಅಂದ್ರೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳೇ ಕಾರಣ. ಹೀಗಾಗಿ ಹಣಕಾಸು ಸಚಿವರು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಾಲ ಮರುಪಾವತಿಗೆ 6 ತಿಂಗಳ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ರಾಜು ಒತ್ತಾಯಿಸಿದ್ದಾರೆ.
ಕೋವಿಡ್ -19 ನಿಂದ ಆಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಶೇ. 25 ರಷ್ಟು ಹೆಚ್ವಿನ ಸಾಲವನ್ನು ಬ್ಯಾಂಕ್ ಗಳು ನೀಡಬೇಕು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿನ ಉದ್ಯೋಗಿಗಳಿಗೆ ಶೇ. 50 ರಷ್ಟು ವೇತನವನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರ ಭರಿಸಬೇಕು. ಇದರ ಜೊತೆಗೆ ಎಂಎಸ್ಎಂಇ ನೌಕರರ ಕೆಲಸದ ವೇಳೆಯನ್ನು 8 ಗಂಟೆಯಿಂದ 10 ಗಂಟೆ ಮಾಡಬೇಕು ಎಂದು ಕೋರಿದರು.
ವಿದ್ಯುತ್ ಮತ್ತು ನೀರಿನ ದರಕ್ಕೆ ಶೇ. 50 ವಿನಾಯಿತಿ ನೀಡುವ ಜೊತೆಗೆ 180 ದಿನಕ್ಕೆ ಎನ್ಪಿಎ ವಿಸ್ತರಿಸಲು ಸರ್ಕಾರವನ್ನು ಕಾಸಿಯಾ ಅಧ್ಯಕ್ಷ ರಾಜು ಆಗ್ರಹಿಸಿದ್ದಾರೆ.