ಬೆಂಗಳೂರು: ನಗರದ ಜನರಿಗೆ ಶಕ್ತಿದೇವತೆಗಳ ಕರಗವೆಂದರೆ ಬಹಳ ವಿಶೇಷವಾದ ಭಕ್ತಿ. ಜಕ್ಕೂರು ಬಳಿಯ ಶ್ರೀರಾಮಪುರದ ಗ್ರಾಮದೇವತೆ ಶ್ರೀ ಮಾರಮ್ಮದೇವಿ ಕರಗ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಶ್ರೀ ಮಾರಮ್ಮ ದೇವಿ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಇಂತಹ ಶಕ್ತಿದೇವತೆಯ ಕರಗ ಒಂದು ಶತಮಾನದ ನಂತರ ನಡೆದಿದ್ದು ವಿಶೇಷ. ಕರಗದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು, ಮಾರಮ್ಮ ದೇವಿಗೆ ಆರತಿ ಎತ್ತಿ ಮಲ್ಲಿಗೆ ಹೂ ಎಸೆಯುತ್ತ ಭಕ್ತಿ ಭಾವದಲ್ಲಿ ಮಿಂದೆದ್ದರು.
ಶ್ರೀ ಮಾರಮ್ಮದೇವಿ ಕರಗ ಹೊರಲು 9ದಿ ನಗಳ ಕಠಿಣ ವ್ರತಾಚರಣೆ ಮಾಡಬೇಕು. ಹೀಗಾಗಿ, ದೇವಾಲಯದ ಹಿರಿಯರ ನಿರ್ಧಾರದಂತೆ ಅರ್ಚಕರಾದ ಸುಬ್ರಹ್ಮಣ್ಯ ಕಠಿಣ ವ್ರತಾಚರಣೆ ಮಾಡಿ ಈ ಬಾರಿ ಕರಗ ಹೊತ್ತಿದ್ದರು. ಮಲ್ಲಿಗೆ ಹೂವಿನಿಂದ ಸಿಂಗರಿಸಿದ್ದ ಕರಗವನ್ನು ಹಾಗೂ ಊರ ದೇವತೆಗಳನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಲಾಯಿತು. ಬ್ಯಾಟರಾಯನಪುರ, ಜಕ್ಕೂರು, ಅಮೃತಹಳ್ಳಿ, ಕೊಡಿಗೇಹಳ್ಳಿ, ಯಲಹಂಕ, ಕೋಗಿಲು ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳು ಕಣ್ತುಂಬಿಕೊಂಡರು.
ಕರಗವು ತಮಟೆ ಕಹಳೆ ಸದ್ದುಗಳೊಂದಿಗೆ ಶ್ರೀರಾಮಪುರ ಗ್ರಾಮದ ಎಲ್ಲಾ ಬೀದಿಗಳಲ್ಲೂ ಸಂಚರಿಸಿತು. ಇದೇ ವೇಳೆ ಮುನೇಶ್ವರಸ್ವಾಮಿ, ಮಹೇಶ್ವರಿದೇವಿ, ದೊಡ್ಡಮ್ಮದೇವಿ, ಪಿಳ್ಳೇಕಮ್ಮದೇವಿ, ಶನಿಮಹಾತ್ಮಸ್ವಾಮಿ, ಶ್ರೀಕೃಷ್ಣ, ಕಾಶಿವಿಶ್ವನಾಥಸ್ವಾಮಿ, ಆಂಜನೇಯಸ್ವಾಮಿ ಕಾಟೇರಮ್ಮದೇವಿ, ಸಾಯಿಬಾಬ, ಮಹಾಗಣಪತಿ ದೇವಾಲಯಗಳಲ್ಲಿ ಮಾರಮ್ಮ ದೇವಿ ಕರಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.