ಬೆಂಗಳೂರು: ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ರಾಜ್ಯ ಬಿಜೆಪಿ ನ.27ರಿಂದ ಗ್ರಾಮ ಸ್ವರಾಜ್ಯ ಯಾತ್ರೆ ಕೈಗೊಳ್ಳಲು ನಿರ್ಧರಿಸಿದೆ. ಈ ಸಂಬಂಧ 5 ತಂಡಗಳನ್ನು ರಚಿಸಿದ್ದು, ಗ್ರಾಮ ಸ್ವರಾಜ್ಯ ಯಾತ್ರೆ ಮೂಲಕ ಗ್ರಾಮೀಣ ಭಾಗದಲ್ಲಿ ಪಕ್ಷ ಬಲವರ್ಧನೆಗೆ ಮುಂದಾಗಿದೆ.
ಪಕ್ಷ ಅಧಿಕಾರದಲ್ಲಿರುವ ಕಾರಣ ಗ್ರಾಮೀಣ ಭಾಗದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಗೊಳಿಸಲು ಬಿಜೆಪಿ ತೀರ್ಮಾನಿಸಿದೆ. ನ.27ರಿಂದ ಗ್ರಾಮ ಸ್ವರಾಜ್ಯ ಯಾತ್ರೆ ಆರಂಭಿಸಲಿದ್ದು, ಡಿ.3ಕ್ಕೆ ಯಾತ್ರೆ ಮುಕ್ತಾಯವಾಗಲಿದೆ. 5 ತಂಡಗಳ ಜತೆಗೆ ಬೂತ್ ಮಟ್ಟದಲ್ಲಿ ಸಕ್ರಿಯ ಕಾರ್ಯನಿರ್ವಹಿಸುವ ಪಂಚರತ್ನ ಸಮಿತಿಯನ್ನು ಸಹ ರಚಿಸಿ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಈ ಕಾಯಕ ಆರಂಭಿಸಿದೆ.
ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದೆ ಶೋಭಾ ಕರಂದ್ಲಾಜೆ ಮತ್ತು ವಿಧಾನಪರಿಷತ್ ಸದಸ್ಯ ರವಿಕುಮಾರ್ ಅವರಿಗೆ ಕರಾವಳಿ ವಿಭಾಗ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಗದಗ ವಿಭಾಗ, ಕಂದಾಯ ಸಚಿವ ಆರ್.ಅಶೋಕ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಅವರಿಗೆ ಹಳೇ ಮೈಸೂರು ವಿಭಾಗ, ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ಗೆ ಬೆಳಗಾವಿ ವಿಭಾಗ ಮತ್ತು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಸಮಾಜ ಕಲ್ಯಾಣ ಸಚಿವ ಶ್ರೀರಾಮುಲುಗೆ ಬಳ್ಳಾರಿ ವಿಭಾಗ ಉಸ್ತುವಾರಿ ನೀಡಲಾಗಿದೆ.
ಒಂದೊಂದು ತಂಡಕ್ಕೂ ಐದಾರು ಜಿಲ್ಲೆಗಳ ಉಸ್ತುವಾರಿ ವಹಿಸಲಾಗುತ್ತದೆ. ಪ್ರತಿಬೂತ್ನಲ್ಲಿ ಪಂಚರತ್ನ ಸಮಿತಿಯನ್ನು ರಚಿಸಲಾಗಿದ್ದು, ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ, ಒಬ್ಬರು ಮಹಿಳೆ ಮತ್ತು ಸಾಮಾನ್ಯ ವರ್ಗದ ವ್ಯಕ್ತಿಯೊಬ್ಬರು ಸಮಿತಿಯಲ್ಲಿ ಇರಲಿದ್ದಾರೆ.
ಒಂದು ದಿನ ಒಂದು ಜಿಲ್ಲೆಯಲ್ಲಿ ಎರಡು ಸಮಾವೇಶ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ಮನದಟ್ಟ ಮಾಡುವುದು. ಪ್ರತಿ ಗ್ರಾಮಕ್ಕೆ ವಿದ್ಯುತ್ ನೀಡಿರುವುದು, ಕೊರೊನಾ ವೇಳೆಯಲ್ಲಿ ಐದು ತಿಂಗಳ ಕಾಲ ರೇಷನ್ ನೀಡಿರುವುದು ಮತ್ತು ಆತ್ಮನಿರ್ಭರ್ ಭಾರತ ಯೋಜನೆ ಕುರಿತು ತಿಳಿಸಬೇಕು. ಪ್ರತಿ ಹಳ್ಳಿಗೂ ತಲುಪಿಸುವ ಕಾರ್ಯವನ್ನು ಈ ಸಮಿತಿಯು ಕಾರ್ಯನಿರ್ವಹಿಸಲಿದೆ.